ಬೆಂಗಳೂರು: ಟೀಮ್ ಇಂಡಿಯಾದ ಸ್ಟಾರ್ ಆಲ್ರೌಂಡರ್ ಹಾಗೂ ಉಪನಾಯಕ ಹಾದಿರ್ಕ್ ಪಾಂಡ್ಯ ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಗಾಯಕ್ಕೆ ತುತ್ತಾದ ಹಿನ್ನೆಲೆಯಲ್ಲಿ ಅವರ ಬದಲಿ ಆಟಗಾರರನ್ನಾಗಿ ಕನ್ನಡಿಗ ಪ್ರಸಿದ್ಧ್ ಕೃಷ್ಣ ತಂಡಕ್ಕೆ ಆಯ್ಕೆ ಆಗಿದ್ದಾರೆ. ಈ ಬಾರಿಯ ವಿಶ್ವಕಪ್ನಲ್ಲಿ ಕೆ ಎಲ್ ರಾಹುಲ್ ಜೊತೆಗೆ ತಂಡದಲ್ಲಿ ಸ್ಥಾನ ಪಡೆದ ಎರಡನೇ ಕನ್ನಡಿಗ ಆಟಗಾರ ಕೃಷ್ಣ. ವಿಶ್ವಕಪ್ ಆಯ್ಕೆ ಆಗಿದ್ದ 18 ಜನ ಆಟಗಾರರ ಪಟ್ಟಿಯಲ್ಲಿ ಪ್ರಸಿದ್ಧ್ ಕೃಷ್ಣ ಅವರನ್ನು ಸೇರಿಸಿಕೊಳ್ಳಲಾಗಿತ್ತು. ಹೀಗಾಗಿ ಪ್ರಸಿದ್ಧ್ ಏಷ್ಯಾಕಪ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಕಾಣಿಸಿಕೊಂಡಿದ್ದರು.
ಹಾರ್ದಿಕ್ ಅಲಭ್ಯವಾಗಿರುವ ಬಗ್ಗೆ ಈಗ ತಂಡದ ಮಾಜಿ ಆಟಗಾರರು ಪ್ರಶ್ನೆ ಎತ್ತುತ್ತಿದ್ದಾರೆ. ಹಾರ್ದಿಕ್ ಬದಲಿ ಆಗಿ ಪ್ರಸಿದ್ಧ ಕೃಷ್ಣ ಅವರ ಆಯ್ಕೆ ಎಷ್ಟು ಸರಿ ಎಂಬುದು ಹಲವರ ಪ್ರಶ್ನೆ ಆಗಿದೆ. 2019 ರಲ್ಲಿ ವಿಜಯ್ ಶಂಕರ್ ಆಯ್ಕೆಗೆ ಹೋಲಿಕೆ ಮಾಡಿ ಟ್ರೋಲ್ಗಳು ಮತ್ತು ಟೀಕೆ ಟಪ್ಪಣಿಗಳನ್ನು ಮಾಡಲಾಗುತ್ತಿದೆ. ಟೀಮ್ ಇಂಡಿಯಾದ ಪ್ಲಾನ್ ಬಿ ಬಗ್ಗೆ ಚಿಂತಿಸಬೇಕು ಎಂಬ ಮಾತುಗಳು ಕೇಳಿ ಬರುತ್ತಿವೆ.
ಟೀಮ್ ಇಂಡಿಯಾದ ಮಾಜಿ ಆಟಗಾರ ಆಕಾಶ್ ಚೋಪ್ರಾ ಆರನೇ ಬೌಲಿಂಗ್ ಆಯ್ಕೆಯ ಬಗ್ಗೆ ಟೀಕೆ ಮಾಡಿದ್ದಾರೆ. ಎಕ್ಸ್ ಆ್ಯಪ್ ಖಾತೆ (ಹಿಂದಿನ ಟ್ವಿಟರ್)ಯಲ್ಲಿ, "ಹಾರ್ದಿಕ್ ಪಾಂಡ್ಯ ವಿಶ್ವಕಪ್‌ನಿಂದ ಹೊರಬಿದ್ದಿದ್ದಾರೆ. ಆರನೇ ಬೌಲಿಂಗ್ ಆಯ್ಕೆಯನ್ನು ಮಾಡಿರುವುದು ದೊಡ್ಡ ಹೊಡೆತ. ಅವರ ಸ್ಥಾನಕ್ಕೆ ಭಾರತದ ವೇಗಿ ಪ್ರಸಿದ್ಧ್ ಕೃಷ್ಣ ಆಯ್ಕೆಯಾಗಿದ್ದಾರೆ. ಇದು ಭಾರತದಲ್ಲಿ ಹಾರ್ದಿಕ್ ಅವರ ಕೌಶಲ್ಯ ಇರುವ ಆಟಗಾರರು ಎಷ್ಟು ಜನ ಲಭ್ಯವಿದ್ದಾರೆ ಎಂಬುದರ ಕುರಿತು ಬಹಳಷ್ಟು ಹೇಳುತ್ತದೆ. ಹಾಗೇ ಇದಕ್ಕೆ ಉತ್ತರ ಶೂನ್ಯ" ಎಂದು ಬರೆದುಕೊಂಡಿದ್ದಾರೆ.