ಟಿ20 ವಿಶ್ವಕಪ್‌ನಲ್ಲಿ ಜಿಂಬಾಬ್ವೆ ತಂಡವು ಸೂಪರ್ 12 ಹಂತದ ಪಂದ್ಯದಲ್ಲಿ ಪಾಕ್ ವಿರುದ್ಧ ಐತಿಹಾಸಿಕ ಗೆಲುವು ಸಾಧಿಸಿದೆ. ವಿಶ್ವಕಪ್ನ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಭಾರತದ ಜೊತೆ ಸೋತ ಪಾಕಿಸ್ತಾನವು ಜಿಂಬಾಬ್ವೆ ನೀಡಿದ 131 ರನ್ಗಳ ಸಾಧಾರಣ ಗುರಿ ಬೆನ್ನಟ್ಟಲು ವಿಫಲವಾಗಿ ಸೋಲುಂಡಿದೆ. ಸದ್ಯ ಪಾಕ್ ತಂಡವು ಟೂರ್ನಿಯಿಂದ ಹೊರಬೀಳುವ ಭೀತಿಯಲ್ಲಿದೆ.
ಜಿಂಬಾಬ್ವೆ ವಿರುದ್ಧದ 1 ರನ್ ಅಂತರದ ಸೋಲಿನ ಬಳಿಕ ಪಾಕಿಸ್ತಾನದ ಸೆಮಿಫೈನಲ್ ಕನಸು ಮಳೆ ಹಾಗೂ ಇತರ ತಂಡಗಳ ಫಲಿತಾಂಶದ ಮೇಲೆ ಅವಲಂಬಿತವಾಗಿದೆ. ಜಿಂಬಾಬ್ವೆ ಗೆಲುವು ಗ್ರೂಪ್ 2ರಲ್ಲಿನ ಪೈಪೋಟಿಯನ್ನು ಇನ್ನಷ್ಟು ಹೆಚ್ಚಿಸಿದೆ. ಪಾಕ್ ಸೆಮಿಫೈನಲ್ ಅರ್ಹತೆ ಪಡೆಯಲು ಈ ಕೆಳಗಿನ ಕೆಲ ಅಂಶಗಳು ಪ್ರಮುಖ ಪಾತ್ರವಹಿಸಲಿವೆ.
- ಮೊದಲನೆಯದಾಗಿ, ಪಾಕಿಸ್ತಾನವು ಟೂರ್ನಿಯಲ್ಲಿ ತನ್ನ ಇನ್ನುಳಿದ ಮೂರು ಪಂದ್ಯಗಳನ್ನೂ ಸಹ ಗೆಲ್ಲಲೇಬೇಕಾಗಿದೆ.
- ಉತ್ತಮ ರನ್ ರೇಟ್ ಕಾಪಾಡಿಕೊಳ್ಳಲು ಪಾಕ್ ಎಲ್ಲ ಮೂರು ಪಂದ್ಯಗಳನ್ನು ಬೃಹತ್ ಅಂತರದಿಂದ ಜಯಿಸಬೇಕು.
- ದಕ್ಷಿಣ ಆಫ್ರಿಕಾವು ಭಾರತ ಮತ್ತು ಪಾಕಿಸ್ತಾನದ ವಿರುದ್ಧ ಸೋಲಬೇಕಿದೆ. ಅಲ್ಲದೆ, ಇತರ ಪಂದ್ಯದ ಫಲಿತಾಂಶಗಳ ಮೇಲೆಯೂ ಪಾಕ್ ಅವಲಂಬಿತವಾಗಿದೆ.
- ಜಿಂಬಾಬ್ವೆ ತನ್ನ ಉಳಿದ ಮೂರು ಪಂದ್ಯಗಳ ಪೈಕಿ ಎರಡರಲ್ಲಿ (ಭಾರತ, ನೆದರ್ಲ್ಯಾಂಡ್ಸ್ ಮತ್ತು ಬಾಂಗ್ಲಾದೇಶ ವಿರುದ್ಧ) ಸೋಲಬೇಕು.
- ಇದಲ್ಲದೇ, ಬಾಂಗ್ಲಾದೇಶ ಮುಂದಿನ ಇನ್ನೊಂದು ಪಂದ್ಯದಲ್ಲಿಯೂ ಸೋಲು ಕಾಣಬೇಕಿದೆ.
- ಒಂದು ವೇಳೆ ಯಾವುದಾದರೂ ಪಂದ್ಯಗಳು ಮಳೆಯಿಂದ ರದ್ದಾದರೂ ಸಹ ಆಗ ಅದು ಪಾಕ್ಗೆ ವರವಾಗಿ ಪರಿಣಮಿಸಬಹುದು. ಇಲ್ಲವೇ ಹಿನ್ನಡೆಗೂ ಕಾರಣವಾಗಬಹುದಾಗಿದೆ.