ಭಾರತ ಕ್ರಿಕೆಟ್ ತಂಡದಲ್ಲಿ ಆಳವಾದ ಬ್ಯಾಟಿಂಗ್ ಶಕ್ತಿ ಇಲ್ಲ ಎಂಬುದು ಹೆಚ್ಚಾಗಿ ಕೇಳಿಬರುವ ಆರೋಪಗಳಲ್ಲಿ ಒಂದು. ಆರು ಅಥವಾ 7ನೇ ವಿಕೆಟ್ ಪತನವಾದಲ್ಲಿ ಕೊನೆಯ ಬಾಲಂಗೋಚಿಗಳು 20 ರನ್‌ಗಳಿಸಲೂ ಪರದಾಡುತ್ತಾರೆ. ಇಂಗ್ಲೆಂಡ್, ಆಸ್ಟ್ರೇಲಿಯಾ ತಂಡಗಳು 9ನೇ ಆಟಗಾರನವರೆಗೂ ಬ್ಯಾಟಿಂಗ್ ಸಾಮರ್ಥ್ಯ ಬೆಳೆಸಿಕೊಂಡಿದೆ ಎಂಬುದು ಕೆಲವು ಕ್ರಿಕೆಟ್ ತಜ್ಞರ ಅಭಿಮತ.
ಈ ವಿಚಾರವಾಗಿ ಪ್ರತಿಕ್ರಿಯಿಸಿದ ನಾಯಕ ರೋಹಿತ್ ಶರ್ಮಾ, "2011ರಲ್ಲಿ ತಂಡ ಉತ್ತಮವಾಗಿತ್ತು. ಎಲ್ಲರೂ ಲಯದಲ್ಲಿದ್ದರು. ನಮ್ಮ ಬಳಿ ಸದ್ಯ ಯಾರೆಲ್ಲಾ ಉತ್ತಮವಾಗಿದ್ದಾರೆ ಮತ್ತು ಅವರಲ್ಲಿ ಯಾರು ಒಳ್ಳೆಯ ಪ್ರದರ್ಶನ ನೀಡುತ್ತಿದ್ದಾರೆ ಎಂಬುದನ್ನು ಮನಗಂಡು ಅಂಥವರಿಗೆ ಅವಕಾಶ ನೀಡುತ್ತಾ ಬಂದಿದ್ದೇವೆ. ನಾವು ರಾತ್ರೋರಾತ್ರಿ ಒಬ್ಬರನ್ನು ಬೌಲರ್ ಆಗಿ ಮಾಡಲು ಸಾಧ್ಯವಿಲ್ಲ. ಈಗ ಆಡುತ್ತಿರುವ ಆಟಗಾರರು ಅವರ ಆಟ ಮತ್ತು ಕೌಶಲ್ಯದಿಂದಾಗಿ ಈ ಸ್ಥಾನದಲ್ಲಿದ್ದಾರೆ. ವಿಶ್ವಕಪ್ ವೇಳೆಗೆ ಸಾಧ್ಯವಾದಲ್ಲಿ ಶರ್ಮಾ ಮತ್ತು ಕೊಹ್ಲಿ ಬೌಲಿಂಗ್ ಮಾಡುತ್ತಾರೆ" ಎಂದು ಹಾಸ್ಯ ಚಟಾಕಿ ಹಾರಿಸಿದರು. ಇದೇ ವೇಳೆ ಅಜಿತ್ ಅಗರ್ಕರ್ "ಅವರಿಗೆ ಮನವರಿಕೆ ಮಾಡಿದ್ದೇವೆ" ಎಂದು ಹೇಳಿದರು.
ಎಲ್ಲರೂ ಬೌಲಿಂಗ್ ಮಾಡಬೇಕು, ಬ್ಯಾಟಿಂಗ್ ಮಾಡಬೇಕು ಎಂಬುದು ಕಷ್ಟ. ಪ್ರತಿಯೊಬ್ಬ ಆಟಗಾರನಿಗೂ ಅವನದೇ ಆದ ಬಲ ಮತ್ತು ದೌರ್ಬಲ್ಯಗಳು ಇರುತ್ತವೆ. ತಂಡ ಸಮತೋಲನ ಕಾಯ್ದುಕೊಳ್ಳಲು ಬ್ಯಾಟರ್, ಆಲ್ರೌಂಡರ್ ಮತ್ತು ಬೌಲರ್ಗಳ ಮಿಶ್ರಣ ಬೇಕು. ಆದರೆ ಹೆಚ್ಚು ಆಲ್ರೌಂಡರ್ಗಳು ಇರುವ ತಂಡ ಬಲಿಷ್ಠವಾಗಿ ಗೋಚರಿಸುತ್ತದೆ. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡದಲ್ಲಿ ಇತ್ತೀಚಿನ ವರ್ಷಗಳಲ್ಲಿ ಟೇಲ್ ಎಂಡ್ ಬ್ಯಾಟರ್ಗಳು ರನ್ ಗಳಿಸುತ್ತಿದ್ದಾರೆ. ಇದನ್ನು ಈಗ ಎಲ್ಲಾ ತಂಡಗಳಲ್ಲೂ ನಿರೀಕ್ಷಿಸಲಾಗುತ್ತಿದೆ.