ಅಹಮದಾಬಾದ್ (ಗುಜರಾತ್): ಕೊನೆಯ ಮತ್ತು ನಾಲ್ಕನೇ ಟೆಸ್ಟ್ ಪಂದ್ಯಕ್ಕಾಗಿ ಭಾರತ ತಂಡ ಮಾರ್ಚ್ 8 ರಂದು ಅಹಮದಾಬಾದ್ ತಲುಪಿದೆ. ಅಹಮದಾಬಾದ್ನಲ್ಲಿ ಟೀಂ ಇಂಡಿಯಾ ಹೋಳಿ ಹಬ್ಬವನ್ನು ಭರ್ಜರಿಯಾಗಿ ಆಚರಿಸಿದೆ. ರೋಹಿತ್ ಶರ್ಮಾ ಎಲ್ಲರಿಗೂ ಬಣ್ಣ ಹಚ್ಚುವ ವಿಡಿಯೋವನ್ನು ಬಿಸಿಸಿಐ ಟ್ವಿಟ್ ಮಾಡಿದೆ.
ಅಹಮದಾಬಾದ್ಗೆ ಬರುವ ಬಸ್ನಲ್ಲೂ ಹೋಳಿ ಆಚರಣೆ ಮಾಡಿದ್ದಾರೆ. ವಿರಾಟ್ ಕೊಹ್ಲಿ ತಮ್ಮ ಟ್ವಿಟರ್ ಖಾತೆಯಲ್ಲಿ ಜಡೇಜ ಜೊತೆಗಿನ ಫೋಟೋ ಹಂಚಿಕೊಂಡು ಹೋಳಿಯ ಶುಭಾಶಯ ತಿಳಿಸಿದ್ದಾರೆ. ಕ್ರಿಡಾಂಗಣಕ್ಕೆ ತಲುಪಿದ ನಂತರ ನಾಯಕ ರೋಹಿತ್ ಶರ್ಮಾ ಎಲ್ಲರಿಗೂ ಬಣ್ಣ ಹಚ್ಚಿದ್ದಾರೆ. ಎಲ್ಲರೂ ಹೋಳಿ ಆಡಿ ಸಂಭ್ರಮಿಸಿದ್ದಾರೆ.
ವಿಡಿಯೋದಲ್ಲಿ ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ, ಸೂರ್ಯ, ಕೆಎಲ್ ರಾಹುಲ್ ಸೇರಿದಂತೆ ತಂಡದ ಕ್ರೀಡಾ ಸಿಬ್ಬಂದಿಯೊಂದಿಗೆ ರೋಹಿತ್ ಶರ್ಮಾ ಬಣ್ಣ ಹಚ್ಚಿದ್ದಾರೆ. ರವೀಂದ್ರ ಜಡೇಜಾ, ಚೇತೇಶ್ವರ ಪೂಜಾರ, ಮೊಹಮ್ಮದ್ ಸಿರಾಜ್, ವಿರಾಟ್ ಕೊಹ್ಲಿ, ಸೂರ್ಯ, ರೋಹಿತ್ ಶರ್ಮಾ ಸೇರಿದಂತೆ ಎಲ್ಲಾ ಆಟಗಾರರು ಬಸ್‌ನಲ್ಲಿ ಡ್ಯಾನ್ಸ್ ಮಾಡಿದ್ದಾರೆ.
ಕಾಮನ ಹಬ್ಬ ಆಚರಿಸಿದ ಸ್ಮಿತ್:ಆಸ್ಟ್ರೇಲಿಯಾದ ನಾಯಕ ಸ್ಟೀವ್ ಸ್ಮಿತ್ ಕೆಲ ಸಹ ಆಟಗಾರರೊಂದಿಗೆ ಬಣ್ಣ ಎರಚಿ ಹೋಳಿ ಆಚರಣೆ ಮಾಡಿದ್ದಾರೆ. ಸ್ಮಿತ್ ಹ್ಯಾಪಿ ಹೋಳಿ ಎಲ್ಲರಿಗೂ ಎಂದು ವಿಶ್ ಮಾಡಿ ಫೋಟೋಗಳನ್ನು ಟ್ವಿಟರ್ ಅಕೌಂಟ್ನಲ್ಲಿ ಹಂಚಿಕೊಂಡಿದ್ದಾರೆ.
ಹೋಳಿ ಶುಭಾಶಯ ತಿಳಿಸಿದ ಪಂತ್:ಕಾರು ಅಪಘಾತದಲ್ಲಿ ಗಾಯಗೊಂಡು ವಿಶ್ರಾಂತಿಯಲ್ಲಿರುವ ರಿಷಬ್ ಪಂತ್ ಟ್ವಿಟರ್ನಲ್ಲಿ ಎಲ್ಲರಿಗೂ ಹೋಳಿಯ ಶುಭಾಶಯ ತಿಳಿಸಿದ್ದಾರೆ. "ಎಲ್ಲರಿಗೂ ಹೋಳಿ ಹಬ್ಬದ ಶುಭಾಶಯಗಳು. ಹೋಳಿಯ ಬಣ್ಣಗಳು ನಿಮ್ಮ ಜೀವನವನ್ನು ಸಂತೋಷದಿಂದ ಮತ್ತು ನೀವು ಬಯಸುವ ಎಲ್ಲವೂ ಸಿಗುವಂತಾಗಲಿ" ಎಂದು ಆಶಿಸಿದ್ದಾರೆ.
ಅಪಘಾತದ ನಂತರ ಅಪರೂಪದ ವಿಚಾರಗಳಿಗೆ ಪಂತ್ ಟ್ವಿಟ್ ಮಾಡುತ್ತಿದ್ದಾರೆ. ಇತ್ತೀಚೆಗೆ ಊರುಗೋಲು ಹಿಡಿದು ನಡೆಯುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದರು. ನಂತರ ಶಿವರಾತ್ರಿಗೆ ವಿಶ್ ಮಾಡಿದ್ದರು. ಸುವಜಿತ್ ಮುಸ್ತಾಫಿ ಎಂಬುವವರು ಬಾಲಕ ಕ್ರಿಕೆಟ್ ಆಡುತ್ತಾ ನಾನು ರಿಷಬ್ ಪಂತ್ ರೀತಿ ಬ್ಯಾಟ್ ಮಾಡುತ್ತೇನೆ ಎಂಬ ವಿಡಿಯೋ ಶೇರ್ ಮಾಡಿದ್ದರು. ಅದನ್ನು ಪಂತ್ ರೀ ಟ್ವಿಟ್ ಮಾಡಿಕೊಂಡಿದ್ದಾರೆ.
ನಾಳೆಯಿಂದ ಅಂತಿಮ ಟೆಸ್ಟ್:ನಾಳೆಯಿಂದ ಅಂತಿಮ ಟೆಸ್ಟ್ ಅಹಮದಾಬಾದ್ನ ಮೊಟೆರಾ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಭಾರತ ಸರಣಿ ಗೆಲುವಿಗಾಗಿ ಎದುರು ನೋಡುತ್ತಿದೆ. ಸ್ಮಿತ್ ನಾಯಕತ್ವದಲ್ಲಿ ಇಂದೋರ್ನ ಹೋಳ್ಕರ್ ಸ್ಟೇಡಿಯಂನಲ್ಲಿ ಮೂರನೇ ಟೆಸ್ಟ್ ಗೆದ್ದಿರುವ ಆಸಿಸ್ ಈ ಪಂದ್ಯ ಗೆದ್ದು ಸರಣಿ ಸಮಬಲ ಸಾಧಿಸಲು ಚಿಂತಿಸಿದೆ.
ಅಹಮದಾಬಾದ್ ಪಿಚ್ ಹೇಗೆ ವರ್ತಿಸುತ್ತದೆ ಎಂಬುದರ ಬಗ್ಗೆ ಉಭಯ ತಂಡದ ಬ್ಯಾಟರ್ಗಳಿಗೆ ಯಕ್ಷ ಪ್ರಶ್ನೆಯಾಗಿದೆ. ಮೂರು ಟೆಸ್ಟ್ ಸ್ಪಿನ್ ಪಿಚ್ ಆಗಿದ್ದು, ಎರಡುವರೆ ದಿನದಲ್ಲಿ ಪಂದ್ಯಗಳು ಲೋ ಸ್ಕೋರ್ನಲ್ಲಿ ಮುಕ್ತಾಯವಾಗಿತ್ತು. ಪ್ರಸ್ತುತ ಬಾರ್ಡರ್ ಗವಾಸ್ಕರ್ ಟ್ರೋಫಿ ಭಾರತದ ಕೈಯಲ್ಲಿದ್ದು, ಅದನ್ನು ಉಳಿಸಿಕೊಳ್ಳಲು ಮತ್ತು ಪಂದ್ಯ ಗೆದ್ದು ಜೂನ್ 7 ರಂದು ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ಗೆ ಆಯ್ಕೆಯಾಗಲು ಭಾರತ ಪ್ರಯತ್ನಿಸುತ್ತಿದೆ.
ಇದನ್ನೂ ಓದಿ:ಐಸಿಸಿ ಟೆಸ್ಟ್ ರ್‍ಯಾಂಕಿಂಗ್: ಅಶ್ವಿನ್ - ಜೇಮ್ಸ್ ಆಂಡರ್ಸನ್ ಅಗ್ರಸ್ಥಾನಕ್ಕಾಗಿ ಪೈಪೋಟಿ