ಜೈಪುರ :ದೇಶಿಯ ಟೂರ್ನಿಯಲ್ಲಿ ಅತ್ಯಂತ ಬಲಿಷ್ಠ ತಂಡಗಳಲ್ಲಿ ಒಂದಾದ ತಮಿಳುನಾಡು ತಂಡಕ್ಕೆ ಆಘಾತಕಾರಿ ಸೋಲುಣಿಸುವ ಮೂಲಕ ಹಿಮಾಚಲ ಪ್ರದೇಶ ಚೊಚ್ಚಲ ವಿಜಯ ಹಜಾರೆ ಟ್ರೋಫಿ ಎತ್ತಿ ಹಿಡಿದಿದೆ.
ಭಾನುವಾರ ಜೈಪುರದ ಸವಾಯ್ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆದ ವಿಜಯ ಹಜಾರೆ ಟ್ರೋಫಿಯ ಫೈನಲ್ ಪಂದ್ಯದಲ್ಲಿ 315 ರನ್ಗಳ ಗುರಿಯನ್ನು ಬೆನ್ನಟ್ಟಿದ ಹಿಮಾಚಲ ಪ್ರದೇಶ 47.3 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 299 ರನ್ಗಳಿಸಿದ್ದ ವೇಳೆ ಮಂದ ಬೆಳಕಿನ ಕಾರಣ ಪಂದ್ಯ ಸ್ಥಗಿತಗೊಂಡಿದ್ದರಿಂದ ವಿಜೆಡಿ ನಿಯಮದನ್ವಯ ಜಯ ಸಾಧಿಸಿ ಚೊಚ್ಚಲ ಡೊಮೆಸ್ಟಿಕ್ ಪ್ರಶಸ್ತಿ ಎತ್ತಿ ಹಿಡಿಯಿತು.
ಮೊದಲು ಬ್ಯಾಟಿಂಗ್ ಮಾಡಿದ್ದ ತಮಿಳುನಾಡು ತಂಡ ಆರಂಭಿಕ ಆಘಾತ ಅನುಭಿಸಿದರೂ ದಿನೇಶ್ ಕಾರ್ತಿಕ್ ಅವರ ಶತಕ ಮತ್ತು ಬಾಬಾ ಇಂದ್ರಜಿತ್ ಅವರ ಅರ್ಧಶತಕ ಹಾಗೂ ಶಾರುಖ್ ಖಾನ್ರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 314 ರನ್ಗಳ ಸವಾಲಿನ ಮೊತ್ತ ಪೇರಿಸಿತ್ತು.
ಕಾರ್ತಿಕ್ 103 ಎಸೆತಗಳಲ್ಲಿ 8 ಬೌಂಡರಿ 7 ಸಿಕ್ಸರ್ ಸಹಿತ 116, ಇಂದ್ರಜಿತ್ 71 ಎಸೆತಗಳಲ್ಲಿ 8 ಬೌಂಡರಿ ಮತ್ತು 1ಸಿಕ್ಸರ್ ನೆರವಿನಿಂದ 80, ಶಾರುಖ್ ಖಾನ್ ಕೇವಲ 21 ಎಸೆತಗಳಲ್ಲಿ ತಲಾ 3 ಬೌಂಡರಿ, ಸಿಕ್ಸರ್ಗಳ ನೆರವಿನಿಂದ 42 ರನ್ಗಳಿಸಿದ್ದರು.
ಹಿಮಾಚಲ ಪ್ರದೇಶದ ಪರ ನಾಯಕ ರಿಷಿ ಧವನ್ 62ಕ್ಕೆ 3, ಪಂಕಜ್ ಜೈಸ್ವಾಲ್ 59ಕ್ಕೆ 4 ವಿಕೆಟ್ ಪಡೆದು ಮಿಂಚಿದ್ದರು. 315 ರನ್ಗಳ ಸ್ಪರ್ಧಾತ್ಮಕ ಮೊತ್ತ ಬೆನ್ನಟ್ಟಿದ ಹಿಮಾಚಲ ಪ್ರದೇಶ 47.3 ಓವರ್ಗಳಲ್ಲಿ 299 ರನ್ಗಳಿಸಿ ವಿಜೆಡಿ ನಿಯಮಧನ್ವಯ 11 ರನ್ಗಳ ಜಯ ಸಾಧಿಸಿತು.
ಆರಂಭಿಕ ಬ್ಯಾಟರ್ ಶುಭ್ಮನ್ ಅರೋರಾ 131 ಎಸೆತಗಳಲ್ಲಿ 13 ಬೌಂಡರಿ ಮತ್ತು 1 ಸಿಕ್ಸರ್ ಸಹಿತ 136 ರನ್, ಅಮಿತ್ ಕುಮಾರ್ 79 ಎಸೆತಗಳಲ್ಲಿ 6 ಬೌಂಡರಿ ಸಹಿತ 74 ಹಾಗೂ ಕೊನೆಯಲ್ಲಿ ನಾಯಕ 23 ಎಸೆತಗಳಲ್ಲಿ 5 ಬೌಂಡರಿ ಹಾಗೂ 1 ಸಿಕ್ಸರ್ಗಳ ಸಹಿತ 42 ರನ್ಗಳಿಸಿ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು.
ಇದನ್ನೂ ಓದಿ:ಅಂತರಿಕ್ಷಯಾನ ಮಾಡಿದ ಯುವರಾಜ್ ಸಿಂಗ್ ಮೊದಲ ಶತಕದ ಬ್ಯಾಟ್!