ನವದೆಹಲಿ:ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಹರ್ಷೆಲ್ ಗಿಬ್ಸ್ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ತಮ್ಮನ್ನು ಕಾಶ್ಮೀರ ಪ್ರೀಮಿಯರ್ ಲೀಗ್ನಲ್ಲಿ ಆಡದಂತೆ ಬೆದರಿಸುತ್ತಿದೆ ಎಂದು ಹೇಳಿದ್ದು, ಸಾಮಾಜಿಕ ಜಾಲಾತಾಣದಲ್ಲಿ ಭಾರಿ ಚರ್ಚೆಗೀಡು ಮಾಡಿದೆ.
ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವೆ ರಾಜಕೀಯ ವೈಶಮ್ಯ ಬಹಳ ವರ್ಷಗಳಿಂದ ಮುಂದುವರಿಯುತ್ತ ಬಂದಿದೆ. ಆದ್ದರಿಂದ ಎರಡು ದೇಶಗಳ ನಡುವೆ ಯಾವುದೇ ರೀತಿಯ ಕ್ರೀಡ ಚಟುವಟಿಕೆ ಕೂಡ ನಡೆಯುತ್ತಿಲ್ಲ. ಈಗಿರುವಾಗ ವಿವಾದಿತ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಕೆಪಿಎಲ್(ಕಾಶ್ಮೀರ ಪ್ರೀಮಿಯರ್ ಲೀಗ್) ನಡೆಸಲು ಸ್ಥಳೀಯ ರಾಜಕಾರಣಿ ಶಹರ್ಯಾರ್ ಅಫ್ರಿದಿ ನಿರ್ಧರಿಸಿದ್ದಾರೆ. ಇದರಲ್ಲಿ ಪಾಕಿಸ್ತಾನದ ಸ್ಟಾರ್ ಕ್ರಿಕೆಟರ್ಗಳಾದ ಇಮಾದ್ ವಸೀಮ್, ಮೊಹಮ್ಮದ್ ಹಫೀಜ್, ಶಾಹಿದ್ ಅಫ್ರಿದಿ, ಶೋಯಬ್ ಮಲಿಕ್ ಮತ್ತು ಕಮ್ರಾನ್ ಅಕ್ಮಲ್ ನೇತೃತ್ವದಲ್ಲಿ 6 ತಂಡಗಳನ್ನು ತಯಾರು ಮಾಡಲಾಗಿದೆ.
ಈ ಲೀಗ್ನಲ್ಲಿ ಆಡುವುದಕ್ಕೆ ಕೆಲವು ವಿದೇಶಿಗರಿಗೂ ಕೆಪಿಎಲ್ ಆಡಳಿತ ಮಂಡಳಿ ಕರೆ ನೀಡಿದೆ. ಆದರೆ ಅದಕ್ಕೆ ಬಿಸಿಸಿಐ ಅಡ್ಡಗಲಾಗಿದೆ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗರು ಈಗಾಗಲೇ ಹೇಳಿಕೆ ನೀಡಿದ್ದಾರೆ. ಆದರೆ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಹರ್ಷೆಲ್ ಗಿಬ್ಸ್ ಕೆಪಿಎಲ್ನಲ್ಲಿ ಆಡದಂತೆ ನನಗೆ ಬಿಸಿಸಿಐ ಬೆದರಿಸುತ್ತಿದೆ ಎಂದು ಶನಿವಾ ಟ್ವೀಟ್ ಮಾಡುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.