ಸೆಂಚುರಿಯನ್ (ದಕ್ಷಿಣ ಆಫ್ರಿಕಾ): ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಭರ್ಜರಿ ಆಟ ಪ್ರದರ್ಶಿಸಿದೆ. ಹರಿಣಗಳ ಬ್ಯಾಟರ್ಗಳು ಆಸಿಸ್ ಬೌಲರ್ಗಳನ್ನು ಮನಬಂದಂತೆ ದಂಡಿಸಿದ್ದಾರೆ. ಹೆನ್ರಿಚ್ ಕ್ಲಾಸೆನ್ ಅವರ ಶತಕ, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಡೇವಿಡ್ ಮಿಲ್ಲರ್ ಅವರ ಅಬ್ಬರದ ಅರ್ಧಶತಕದ ಆಟದಿಂದ 50 ಓವರ್‌ಗಳ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡ ದಕ್ಷಿಣ ಆಫ್ರಿಕಾ 416 ರನ್ ಪೇರಿಸಿತು.
ಸೂಪರ್‌ಸ್ಪೋರ್ಟ್ ಪಾರ್ಕ್ನಲ್ಲಿ ನಡೆದ ಪಂದ್ಯದಲ್ಲಿ ಹೆನ್ರಿಚ್ ಕ್ಲಾಸೆನ್ 85 ಬಾಲ್ನಲ್ಲಿ ಬಿರುಸಿನ 174 ರನ್ ಗಳಿಸಿದರು. ಕ್ಲಾಸೆನ್ ಜೊತೆಗೆ ಡೇವಿಡ್ ಮಿಲ್ಲರ್ ಆರನೇ ವಿಕೆಟ್ಗೆ ಒಂದಾಗಿ 222 ರನ್ಗಳ ಜೊತೆಯಾಟ ಮಾಡಿದರು. ಮಿಲ್ಲರ್ ಮತ್ತು ಕ್ಲಾಸೆನ್ ಅವರ ಅಬ್ಬರದ ಜೊತೆಯಾಟದ ಪರಿಣಾಮ ದಕ್ಷಿಣ ಆಫ್ರಿಕಾ 7ನೇ ಬಾರಿ 400ಕ್ಕೂ ಅಧಿಕ ರನ್ ಗಳಿಸಿದ ದಾಖಲೆ ಮಾಡಿತು.
ಟಾಸ್ ಗೆದ್ದ ಆಸ್ಟ್ರೇಲಿಯಾ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ ಮಿಚೆಲ್ ಮಾರ್ಷ್ ಲೆಕ್ಕಾಚಾರವನ್ನು ದಕ್ಷಿಣ ಆಫ್ರಿಕಾ ಬ್ಯಾಟರ್ಗಳು ಬುಡಮೇಲು ಮಾಡಿದರು. ಕ್ವಿಂಟನ್ ಡಿ ಕಾಕ್ (45) ಮತ್ತು ರೀಜಾ ಹೆಂಡ್ರಿಕ್ಸ್ (28) 64 ರನ್ಗಳ ಉತ್ತಮ ಆರಂಭ ಮಾಡಿದರು. ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ 62 ಇನ್ನಿಂಗ್ಸ್ ಆಡಿದರು. ಐಡೆನ್ ಮಾರ್ಕ್ರಾಮ್ 8 ರನ್ ಗಳಿಸಿ ಔಟಾದಾಗ ದ.ಆಫ್ರಿಕಾ 149 ರನ್ ಗಳಿಸಿತ್ತು.
4 ವಿಕೆಟ್ ಪತನದ ನಂತರ ಹೆನ್ರಿಕ್ ಕ್ಲಾಸೆನ್ ಮತ್ತು ಡೇವಿಡ್ ಮಿಲ್ಲರ್ ಹೊಡಿಬಡಿ ಆಟಕ್ಕೆ ಮುಂದಾದರು. ಕೇವಲ 85 ಬಾಲ್ ಆಡಿದ ಕ್ಲಾಸೆನ್ 13 ಬೌಂಡರಿ ಮತ್ತು 13 ಸಿಕ್ಸ್ನಿಂದ 174 ರನ್ ಕಲೆಹಾಕಿದರು. ಅವರ ಜೊತೆಗೂಡಿ ಮಿಲ್ಲರ್ 45 ಬಾಲ್ಗೆ 6 ಬೌಂಡರಿ ಮತ್ತು 5 ಸಿಕ್ಸ್ನ ಸಹಾಯದಿಂದ 82 ರನ್ ಗಳಿಸಿದರು. 49.6ನೇ ಬಾಲ್ನಲ್ಲಿ ಕ್ಲಾಸೆನ್ ವಿಕೆಟ್ ಕೊಟ್ಟರೆ, ಮಿಲ್ಲರ್ ಅಜೇಯವಾಗಿ ಉಳಿದರು.
ಹಲವು ದಾಖಲೆಗಳು:
- 52 ಬಾಲ್ನಲ್ಲಿ 100 ರನ್ ಗಳಿಸಿ ಅತ್ಯಂತ ವೇಗವಾಗಿ ಶತಕ ಗಳಿಸಿದ 4ನೇ ದಕ್ಷಿಣ ಆಪ್ರಿಕಾ ಬ್ಯಾಟರ್ ಎಂಬ ದಾಖಲೆಯನ್ನು ಕ್ಲಾಸೆನ್ ಮಾಡಿದರು. ಇವರಿಗೂ ಮೊದಲು 31 ಬಾಲ್ನಲ್ಲಿ ಎಬಿ ಡಿ ವಿಲಿಯರ್ಸ್, 41 - ಮಾರ್ಕ್ ಬ್ರೌಚರ್, 52 - ಎಬಿ ಡಿ ವಿಲಿಯರ್ಸ್ ದಾಖಲೆಗಳಿವೆ.
- 7ನೇ ಬಾರಿಗೆ ದಕ್ಷಿಣ ಆಫ್ರಿಕಾ ತಂಡ ಏಕದಿನ ಕ್ರಿಕೆಟ್ನಲ್ಲಿ 400ಕ್ಕೂ ಅಧಿಕ ರನ್ ಗಳಿಸಿದೆ. ಭಾರತ -6, ಇಂಗ್ಲೆಂಡ್ - 5, ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ತಲಾ ಎರಡು ಬಾರಿ 400 ಗಡಿ ದಾಟಿವೆ.
- ಆಸ್ಟ್ರೇಲಿಯಾ ವಿರುದ್ಧ ವಿರಾಟ್ ಕೊಹ್ಲಿ (52 ಬಾಲ್) ನಂತರ ಅಂತ್ಯಂತ ವೇಗವಾಗಿ ಶತಕಗಳಿಸಿದ ಎರಡನೇ ಬ್ಯಾಟರ್ ಕ್ಲಾಸೆನ್ (57 ಬಾಲ್).
- ಪಂದ್ಯದಲ್ಲಿ 0/133 ರನ್ ಕೊಟ್ಟ ಆ್ಯಡಂ ಝಾಂಪ, ಮೈಕ್ ಲಿವೀಸ್ ಜೊತೆ ಜಂಟಿಯಾಗಿ ಏಕದಿನ ಕ್ರಿಕೆಟ್ನಲ್ಲಿ ವಿಕೆಟ್ ಪಡೆದುಕೊಳ್ಳದೇ ಅತಿ ಹೆಚ್ಚು ರನ್ ಬಿಟ್ಟುಕೊಟ್ಟ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ.
- 13 ಸಿಕ್ಸ್ ಗಳಸಿದ ಕ್ಲಾಸೆನ್ ಒಂದು ಏಕದಿನ ಇನ್ನಿಂಗ್ಸ್ನಲ್ಲಿ ಅತಿ ಹೆಚ್ಚು ಸಿಕ್ಸ್ ಗಳಿಸಿದ ಎರಡನೇ ಆಟಗಾರ. ಎಬಿ ಡಿ ವಿಲಿಯರ್ಸ್ 16 ಸಿಕ್ಸ್ ಹೊಡದು ಮೊದಲಿಗರು.
- 5ನೇ ವಿಕೆಟ್ ನಂತರ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಕ್ಲಾಸೆನ್. ಭಾರತದ ಕಪಿಲ್ ದೇವ್ 175 ರನ್ ಗಳಿಸಿ ಮೊದಲಿಗರಾಗಿದ್ದಾರೆ.
ಇದನ್ನೂ ಓದಿ:ವಿಶ್ವಕಪ್ ಕ್ರಿಕೆಟ್ ಸೆಮಿ ಫೈನಲ್, ಫೈನಲ್ ನೋಡುವ ಆಸೆಯೇ?: ಟಿಕೆಟ್ ಲಭ್ಯತೆ ಕುರಿತು ಇಲ್ಲಿದೆ ಮಾಹಿತಿ