ಪುಣೆ: ಹಾಲಿ ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂದ ಮೊದಲ ನಾಲ್ಕು ಪಂದ್ಯಗಳಲ್ಲಿ ಜಯಭೇರಿ ಬಾರಿಸಿದೆ. ಇಂದು ಧರ್ಮಶಾಲಾದಲ್ಲಿ ಬಲಿಷ್ಠ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದ್ದು, ಪಂದ್ಯಕ್ಕೆ ಟೀಂ ಇಂಡಿಯಾದ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅಲಭ್ಯರಾಗಿದ್ದಾರೆ. ಟೂರ್ನಿಯಲ್ಲಿ ಜಯದ ನಾಗಾಲೋಟ ಮುಂದುವರಿಸಲು ಭಾರತ ಇಂದು ಕಿವೀಸ್ ತಂಡವನ್ನು ಮಣಿಸಬೇಕಿದೆ. ಇಂದಿನ ಪಂದ್ಯ ಎರಡೂ ತಂಡಗಳಿಗೂ ಪ್ರತಿಷ್ಠೆಯಾಗಿದೆ. ಸೆಮಿಫೈನಲ್ ಸ್ಥಾನ ಕಾಯ್ದಿರಿಸಿಕೊಳ್ಳಲು ಈ ಮ್ಯಾಚ್ ಮುಖ್ಯವಾಗಿದೆ ಎಂದು ಮಾಜಿ BCCI ಆಯ್ಕೆಗಾರ ಸುರೇಂದ್ರ ಭಾವೆ ತಿಳಿಸಿದ್ದಾರೆ.
"ಭಾರತಕ್ಕೆ ಮುಂದಿನ ಮೂರು ಪಂದ್ಯಗಳು ಮಹತ್ವದ್ದಾಗಿವೆ. ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ವಿರುದ್ಧ ಸೆಣಸಿ ಗೆಲ್ಲುವುದು ಬಹಳ ಮುಖ್ಯ. ಈ ಮೂರು ತಂಡಗಳು ಬಲಿಷ್ಠವಾಗಿವೆ. ಇಂದಿನ ಪಂದ್ಯ ಸೆಮಿ ಫೈನಲ್ ಎಂಟ್ರಿಯನ್ನು ನಿರ್ಣಾಯಕಗೊಳಿಸಲಿದೆ. ಸದ್ಯ ಟೂರ್ನಿಯಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ಉತ್ತಮವಾಗಿ ಆಡುತ್ತಿದ್ದು, ಈ ಎರಡೂ ತಂಡಗಳು ಫೈನಲ್‌ವರೆಗೆ ಹೋಗಲಿವೆ" ಎಂದು ಭಾವೆ ETV ಭಾರತ್‌ನೊಂದಿಗಿನ ವಿಶೇಷ ಚಾಟ್‌ನಲ್ಲಿ ತಿಳಿಸಿದ್ದಾರೆ.
ರೋಹಿತ್ ಶರ್ಮಾ ತಮ್ಮ ನಾಯಕತ್ವದಲ್ಲಿ ಸೃಜನಶೀಲತೆ ತೋರಿದ್ದು, ಹಾಲಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಅಜೇಯ ಅಭಿಯಾನ ಮುಂದುವರಿಸಿದೆ. ಸದ್ಯ ಭಾರತ ತಂಡದ ಬೌಲಿಂಗ್ ಉತ್ತಮವಾಗಿದೆ. ಬ್ಯಾಟಿಂಗ್ ಕೂಡ ಚೆನ್ನಾಗಿದೆ. ಇನ್ನು ಫೀಲ್ಡಿಂಗ್ ವಿಭಾಗದಲ್ಲಿ ಕೂಡ ಕ್ಷೇತ್ರ ರಕ್ಷಣೆ ಅದ್ಭುತವಾಗಿದ್ದು, ರನ್ ಹರಿಯುವಿಕೆಯನ್ನು ತಡೆಯುತ್ತಿದ್ದಾರೆ ಎಂದು ಟೀಂ ಇಂಡಿಯಾವನ್ನು ಶ್ಲಾಘಿಸಿದರು.