ನವದೆಹಲಿ:ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ಅವರನ್ನು ಮುಂದುವರಿಸಲಾಗಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಿನ್ನೆಯಷ್ಟೇ ಘೋಷಿಸಿದೆ. ಆದರೆ, ವಿಸ್ತರಿತ ಅವಧಿ ಎಷ್ಟು ಎಂಬುದರ ಬಗ್ಗೆ ಮಾಹಿತಿ ನೀಡಿರಲಿಲ್ಲ. 'ದ್ರಾವಿಡ್ ಕೂಡ ಇನ್ನೂ ಯಾವುದೇ ಒಪ್ಪಂದ ಪತ್ರಗಳಿಗೆ ಸಹಿ ಮಾಡಿಲ್ಲ' ಎಂದು ಅವರೇ ಗುರುವಾರ ಸ್ಪಷ್ಟಪಡಿಸಿದ್ದಾರೆ.
ವಿಶ್ವಕಪ್ವರೆಗಿನ ದ್ರಾವಿಡ್ರ ಕೋಚ್ ಅವಧಿ ಮುಕ್ತಾಯವಾಗಿತ್ತು. ಅದಾದ ಬಳಿಕ ಅವರನ್ನು ಹುದ್ದೆಯಲ್ಲಿ ಮುಂದುವರಿಸುವ ಬಗ್ಗೆ ಮಾತುಕತೆಗಳು ನಡೆದಿದ್ದವು. ನವೆಂಬರ್ 29 ರಂದು ಬಿಸಿಸಿಐ ಅಧಿಕೃತ ಪ್ರಕಟಣೆ ಹೊರಡಿಸಿದ ಟೀಂ ಇಂಡಿಯಾದ ಕೋಚ್ ಹುದ್ದೆಯಲ್ಲಿ ಈಗಿನ ಸಿಬ್ಬಂದಿಯನ್ನೇ ಮುಂದುವರಿಸಲಾಗುವುದು ಎಂದು ತಿಳಿಸಿತ್ತು. ಆದರೆ, ಅವಧಿಯ ಬಗ್ಗೆ ಉಲ್ಲೇಖಿಸಿರಲಿಲ್ಲ.
ಈ ಬಗ್ಗೆ ಮಾಧ್ಯಮಗಳು ರಾಹುಲ್ ದ್ರಾವಿಡ್ರಿಗೆ ಪ್ರಶ್ನೆ ಕೇಳಿದಾಗ, 'ಟೀಮ್ ಇಂಡಿಯಾದೊಂದಿಗಿನ ಒಪ್ಪಂದದ ಅವಧಿಯ ಬಗ್ಗೆ ಯಾವುದೇ ಪತ್ರಗಳಿಗೆ ನಾನಿನ್ನೂ ಸಹಿ ಮಾಡಿಲ್ಲ. ಬಿಸಿಸಿಐನಿಂದ ಅಧಿಕೃತ ದಾಖಲೆ ಪತ್ರಗಳು ಬರಲಿ ನೋಡೋಣ. ಹುದ್ದೆಯಲ್ಲಿ ತಮ್ಮನ್ನು ಮುಂದುವರಿಸಿದ್ದನ್ನು ಬಿಸಿಸಿಐ ಅಧಿಕೃತವಾಗಿ ಪ್ರಕಟಿಸಿದೆ ಅಷ್ಟೆ ಎಂದು ಹೇಳುವ ಮೂಲಕ ತಮ್ಮ ವಿಸ್ತರಿಸಿದ ಅವಧಿಯ ಬಗ್ಗೆ ಮಾಹಿತಿ ನೀಡಲಿಲ್ಲ.
ಬಿಸಿಸಿಐ ಪ್ರಕಟಣೆಯಲ್ಲಿ ಏನಿತ್ತು?:ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್, ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್, ಫೀಲ್ಡಿಂಗ್ ಕೋಚ್ ಟಿ ದಿಲೀಪ್ ಮತ್ತು ಬೌಲಿಂಗ್ ಕೋಚ್ ಪಾರಸ್ ಮಾಂಬ್ರೆ ಅವರನ್ನು ಹುದ್ದೆಗಳಲ್ಲಿ ಮುಂದುವರಿಸಲಾಗುವುದು. ಅವರ ಸಾರಥ್ಯದಲ್ಲಿ ತಂಡ ಉತ್ತಮ ಪ್ರದರ್ಶನ ನೀಡಿದೆ. ಈ ಸಾಧನೆಯ ಬಗ್ಗೆ ತೃಪ್ತಿ ಇದೆ. ಹೀಗಾಗಿ ಅವರ ಅವಧಿಯನ್ನು ವಿಸ್ತರಣೆ ಮಾಡಲು ಬಿಸಿಸಿಐ ಆಡಳಿತ ಮಂಡಳಿ ಸರ್ವಾನುಮತದಿಂದ ಒಪ್ಪಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿತ್ತು.
ಟಿ-20 ವಿಶ್ವಕಪ್ ಗುರಿ:ಕೋಚ್ ಹುದ್ದೆಯಲ್ಲಿ ದ್ರಾವಿಡ್ ಅವರನ್ನು ಮುಂದುವರಿಸಿದ್ದರ ಹಿಂದೆ ಟಿ20 ವಿಶ್ವಕಪ್‌ನ ಗುರಿ ಇದೆ. ಮುಂದಿನ ವರ್ಷದ ಜೂನ್ನಲ್ಲಿ ಅಮೆರಿಕ ಮತ್ತು ವೆಸ್ಟ್ ಇಂಡೀಸ್ನಲ್ಲಿ ಟೂರ್ನಿ ನಡೆಯಲಿದೆ. ಮಹತ್ವದ ಟೂರ್ನಿ ಮುಂದಿಟ್ಟುಕೊಂಟು ಹೊಸ ಸಿಬ್ಬಂದಿ ನೇಮಕ ತಂಡದ ದೃಷ್ಟಿಯಿಂದ ಒಳಿತಲ್ಲ ಎಂಬ ಕಾರಣಕ್ಕೆ ಈಗಿನ ಸಿಬ್ಬಂದಿಯನ್ನೇ ಮುಂದುವರಿಸುವ ಬಗ್ಗೆ ಬಿಸಿಸಿಐ ಚಿಂತಿಸಿದೆ.
ಒಪ್ಪಂದದ ವಿಸ್ತರಣೆಯ ಘೋಷಣೆಯ ನಂತರ ದ್ರಾವಿಡ್ ಅವರು, ನನ್ನ ಮೇಲೆ ನಂಬಿಕೆ ಇಟ್ಟು ಕೋಚ್ ಅವಧಿಯನ್ನು ವಿಸ್ತರಣೆ ಮಾಡಿದ್ದಕ್ಕೆ ಬಿಸಿಸಿಐ ಆಡಳಿತ ಮಂಡಳಿಗೆ ಧನ್ಯವಾದ ಹೇಳುತ್ತೇನೆ. ಏಕದಿನ ವಿಶ್ವಕಪ್‌ನ ನಂತರ ಹೊಸ ಸವಾಲುಗಳು ಎದುರಾಗಲಿದ್ದು, ಅವುಗಳನ್ನು ಎದುರಿಸಲು ಸಜ್ಜಾಗಬೇಕಿದೆ ಎಂದು ಹೇಳಿದ್ದರು.
ಇದನ್ನೂ ಓದಿ:ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ಮುಂದುವರಿಕೆ: ಬಿಸಿಸಿಐ ಘೋಷಣೆ