ನವದೆಹಲಿ: ಲೆಜೆಂಡ್ಸ್ ಲೀಗ್ ಕ್ರಿಕೆಟ್ (LLC) ಪಂದ್ಯದ ವೇಳೆ ಮೈದಾನದಲ್ಲೇ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರರಾದ ಎಸ್.ಶ್ರೀಶಾಂತ್ ಹಾಗೂ ಗೌತಮ್ ಗಂಭೀರ್ ನಡುವೆ ವಾಗ್ವಾದ ನಡೆದಿದೆ. ಈ ಸಂದರ್ಭದಲ್ಲಿ ಖ್ಯಾತ ಬ್ಯಾಟರ್ ಹಾಗೂ ತಂಡದ ಮಾಜಿ ಸಹ ಆಟಗಾರ ಗಂಭೀರ್ ತಮ್ಮನ್ನು 'ಫಿಕ್ಸರ್' ಎಂದು ಕರೆದಿರುವುದಾಗಿ ವೇಗದ ಬೌಲರ್ ಆರೋಪಿಸಿದ್ದಾರೆ.
ಬುಧವಾರ ನಡೆದ ಎಲ್‌ಎಲ್‌ಸಿ ಟೂರ್ನಿಯ ಎಲಿಮಿನೇಟರ್ ಪಂದ್ಯದಲ್ಲಿ ಇಂಡಿಯಾ ಕ್ಯಾಪಿಟಲ್ಸ್ ಮತ್ತು ಗುಜರಾತ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮಾಜಿ ಕ್ರಿಕೆಟಿಗರಾದ ಗೌತಮ್ ಗಂಭೀರ್ ಹಾಗೂ ಎಸ್.ಶ್ರೀಶಾಂತ್ ಮಧ್ಯೆ ಮಾತಿನ ಚಕಮಕಿ ಉಂಟಾಗಿದೆ. ಮೈದಾನದಲ್ಲೇ ಆಟಗಾರರ ನಡುವಿನ ವಾಗ್ವಾದದ ದೃಶ್ಯಗಳು ಕ್ಯಾಮೆರಾದಲ್ಲೂ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಿರಿಯ ಕ್ರಿಕೆಟಿಗರ ನಡುವಿನ ಈ ಜಗಳ ವ್ಯಾಪಕ ಟೀಕೆಗೂ ಗುರಿಯಾಗಿದೆ.
ಇಂಡಿಯಾ ಕ್ಯಾಪಿಟಲ್ಸ್ ಪರ ಬ್ಯಾಟಿಂಗ್ಗಾಗಿ ಕ್ರೀಸ್ನಲ್ಲಿದ್ದಾಗ ಗಂಭೀರ್ ಜೊತೆಗೆ ಗುಜರಾತ್ ಜೈಂಟ್ಸ್ ತಂಡದ ಬೌಲರ್ ಶ್ರೀಶಾಂತ್ ಫೀಲ್ಡ್ ಮಾಡುತ್ತಿದ್ದರು. ಇಬ್ಬರೂ ವಾಗ್ವಾದದಲ್ಲಿ ತೊಡಗಿದ್ದಾಗ ಇತರ ಆಟಗಾರರು ಮತ್ತು ಅಂಪೈರ್ ಮಧ್ಯಪ್ರವೇಶಿಸಿ ಸಮಾಧಾನಪಡಿಸಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಮೈದಾನದಲ್ಲಿನ ಈ ವಾಕ್ಸಮರದ ಕಾರಣವನ್ನು ಶ್ರೀಶಾಂತ್ ವಿವರಿಸಿ, ಗುರುವಾರ ಬೆಳಿಗ್ಗೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ.
ಗಂಭೀರ್ ನನ್ನ 'ಫಿಕ್ಸರ್' ಎಂದು ಕರೆದರು-ಶ್ರೀಶಾಂತ್: ಈ ಘಟನೆ ಕುರಿತು ವಿಡಿಯೋ ಪೋಸ್ಟ್ ಮಾಡಿರುವ ಶ್ರೀಶಾಂತ್, ''ಏನಾಯಿತು ಎಂದು ಬಹಳಷ್ಟು ಜನರು ನನ್ನನ್ನು ಕೇಳುತ್ತಿದ್ದಾರೆ. ನಾನು ತಪ್ಪು ಸುದ್ದಿಗಳನ್ನು ಹರಡಲು ಹೆಚ್ಚು ಸಾರ್ವಜನಿಕಗೊಳಿಸಲು ಹೋಗುವುದಿಲ್ಲ. ಗಾಳಿ ಸುದ್ದಿಯನ್ನು ತಡೆಯಲು ನಾನು ಲೈವ್‌ಗೆ ಬಂದಿದ್ದೇನೆ. ನಾನು ಕೇವಲ ಸಾಮಾನ್ಯ ವ್ಯಕ್ತಿ. ದೇವರು ನನ್ನ ಮೇಲೆ ದಯೆ ತೋರಿದ್ದಾನೆ. ನನ್ನ ಹೋರಾಟಗಳನ್ನು ನಾನೇ ಮಾಡಿದ್ದೇನೆ'' ಎಂದು ಹೇಳಿದ್ದಾರೆ.
ಮುಂದುವರೆದು ವಾಕ್ಸಮರದ ಮಾತನಾಡಿರುವ ಶ್ರೀಶಾಂತ್, ''ಲೈವ್ ಟಿವಿಯಲ್ಲಿ ಸೆಂಟರ್ ವಿಕೆಟ್‌ನಲ್ಲಿದ್ದ ಅವರು ನನ್ನನ್ನು 'ಫಿಕ್ಸರ್'.. 'ಫಿಕ್ಸರ್'.. 'ಫಿಕ್ಸರ್' ಎಂದು ಕರೆದರು. ನಾನು ಯಾವುದೇ ನಿಂದನೀಯ ಪದಗಳನ್ನು ಬಳಸಲಿಲ್ಲ. 'ನೀವು ಏನು ಹೇಳುತ್ತಿದ್ದೀರಿ' ಎಂದು ಅವರನ್ನು ಪ್ರಶ್ನಿಸಿ, ನಾನು ವ್ಯಂಗ್ಯವಾಗಿ ನಕ್ಕೆ ಅಷ್ಟೇ. ನಾನು ದೂರ ಹೋದರೂ ಅವರು ಅಂಪೈರ್‌ಗಳಿಗೆ ಅದೇ ಭಾಷೆಯಲ್ಲಿ ಹೇಳುತ್ತಿದ್ದರು'' ಎಂದು ಆರೋಪಿಸಿದ್ದಾರೆ. ಅಲ್ಲದೇ, ಇತರ ಆಟಗಾರರೊಂದಿಗೂ ಗಂಭೀರ್ ಕೆಟ್ಟದಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ವೇಗಿ ದೂರಿದ್ದಾರೆ.
ಶ್ರೀಶಾಂತ್ ವಿರುದ್ಧದ ವಿವಾದ ಪ್ರಕರಣ:2013ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡುತ್ತಿದ್ದಾಗ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಶ್ರೀಶಾಂತ್ ಭಾಗಿಯಾಗಿದ್ದರು. ಈ ಸಂಬಂಧ ದೆಹಲಿ ಪೊಲೀಸರು ಅಜಿತ್ ಚಾಂಡಿಲಿಯಾ ಮತ್ತು ಅಂಕೀತ್ ಚವಾಣ್ ಜೊತೆಗೆ ಶ್ರೀಶಾಂತ್ ಅವರನ್ನೂ ಬಂಧಿಸಿದ್ದರು. ತನಿಖೆಯ ನಂತರ, ಅವರನ್ನು ಬಿಸಿಸಿಐ ತಪ್ಪಿತಸ್ಥ ಎಂದು ಘೋಷಿಸಿ, ಆಜೀವ ನಿಷೇಧ ವಿಧಿಸಿತ್ತು. ಆಜೀವ ನಿಷೇಧವನ್ನು ಕೇರಳ ಹೈಕೋರ್ಟ್ ಎತ್ತಿ ಹಿಡಿದಿತ್ತು. 2019ರಲ್ಲಿ ಸುಪ್ರೀಂ ಕೋರ್ಟ್ ಬಿಸಿಸಿಐ ಆದೇಶವನ್ನು ರದ್ದುಗೊಳಿಸಿ, ಮೂರು ತಿಂಗಳೊಳಗೆ ಶ್ರೀಶಾಂತ್ ಮನವಿಯನ್ನು ಮರುಪರಿಶೀಲಿಸುವಂತೆ ಕ್ರಿಕೆಟ್ ಸಂಸ್ಥೆಗೆ ಸೂಚಿಸಿತ್ತು. ಇದರ ಬೆನ್ನಲ್ಲೇ ಬಿಸಿಸಿಐ ಆಜೀವ ನಿಷೇಧವನ್ನು ಏಳು ವರ್ಷಕ್ಕಿಳಿಸಿತ್ತು. ಇದು 2020ರ ಸೆಪ್ಟೆಂಬರ್ 13ಕ್ಕೆ ಕೊನೆಗೊಂಡಿದೆ.
ಇದನ್ನೂ ಓದಿ:ಚೆಂಡನ್ನು ಕೈಯಿಂದ ತಳ್ಳಿ ಫೀಲ್ಡಿಂಗ್‌ಗೆ ಅಡ್ಡಿ: ಬಾಂಗ್ಲಾ ಕ್ರಿಕೆಟಿಗ ಮುಶ್ಫಿಕರ್ ರಹೀಮ್ ಔಟ್