ಮುಂಬೈ : 5 ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ 15ನೇ ಆವೃತ್ತಿಯ ಐಪಿಎಲ್ನಲ್ಲಿ ಸತತ 8 ಸೋಲುಗಳ ಬಳಿಕ ಮೊದಲ ಜಯ ಸಾಧಿಸಿದೆ. ಈಗಾಗಲೇ ಪ್ಲೇ ಆಫ್ ರೇಸ್ನಿಂದ ಹೊರಬಿದ್ದಿದ್ದ ಮುಂಬೈ ತಂಡ ಕೆಲವು ಗೆಲುವುಗಳನ್ನು ಪಡೆದು ಟೂರ್ನಿಯನ್ನು ಅಂತ್ಯಗೊಳಿಸುವ ಇರಾದೆ ಹೊಂದಿತ್ತು. ಇದೀಗ ಏಪ್ರಿಲ್ 30ರಂದು ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ ಮೊದಲ ಗೆಲುವಿನ ಸಿಹಿಯನ್ನು ಸವಿದಿದೆ.
ಈ ಪಂದ್ಯದ ಗೆಲುವಿನಲ್ಲಿ ಸೂರ್ಯಕುಮಾರ್ ಯಾದವ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರಾದರೂ, 24 ವರ್ಷದ ಪದಾರ್ಪಣೆ ಸ್ಪಿನ್ನರ್ ಕುಮಾರ್ ಕಾರ್ತಿಕೇಯನ್ ಪಾತ್ರ ಕಡೆಗಣಿಸುವಂತಿರಲಿಲ್ಲ. ಅವರು 4 ಓವರ್ಗಳಲ್ಲಿ 19 ರನ್ ನೀಡಿ ರಾಯಲ್ಸ್ ನಾಯಕ ಸಂಜು ಸಾಮ್ಸನ್ ವಿಕೆಟ್ ಪಡೆದು ಗಮನ ಸೆಳದಿದ್ದರು.
ಗಾಯಾಳು ಅರ್ಶದ್ ಖಾನ್ ಬದಲಿಗೆ ತಂಡ ಸೇರಿಕೊಂಡ ಕಾರ್ತಿಕೇಯನ್ ಮೊದಲ ಪಂದ್ಯದಲ್ಲಿ ಒತ್ತಡಕ್ಕೆ ಒಳಗಾದರೂ ಉತ್ತಮ ಪ್ರದರ್ಶನ ತೋರಿದ್ದರು. ಈ ಪಂದ್ಯದ ವೇಳೆ ತಮ್ಮ ಹಿನ್ನೆಲೆ ಬಗ್ಗೆ ಮಾತನಾಡಿರುವ ಅವರು, ಕಳೆದ 9 ವರ್ಷಗಳಿಂದ ತಮ್ಮ ಮನೆಗೆ ತಾನು ಹೋಗಿಲ್ಲ ಎಂಬ ಅಚ್ಚರಿಯ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
"ನಾನು ಕಳೆದ 9 ವರ್ಷಗಳಿಂದ ಮನೆಗೆ ಹೋಗಿಲ್ಲ. ನನ್ನ ಜೀವನದಲ್ಲಿ ಏನನ್ನಾದರೂ ಸಾಧಿಸಿದ ನಂತರವಷ್ಟೇ ಮನೆಗೆ ಹಿಂತಿರುಗುತ್ತೇನೆ ಎಂದು ನಿರ್ಧರಿಸಿದ್ದೆ. ನಮ್ಮ ತಂದೆ-ತಾಯಿ ಆಗಾಗ್ಗೆ ಕರೆಯುತ್ತಿರುತ್ತಾರೆ. ಆದರೆ, ನಾನು ನನ್ನ ನಿರ್ಧಾರಕ್ಕೆ ಬದ್ಧನಾಗಿದ್ದೆ. ಇದೀಗ ಐಪಿಎಲ್ ಮುಗಿದ ನಂತರ ನಾನು ಮನೆಗೆ ತೆರಳುತ್ತೇನೆ" ಎಂದು ಹೇಳಿದ್ದಾರೆ.
ನಾನೊಬ್ಬ ಮಿಸ್ಟರಿ ಬೌಲರ್ :ರಾಯಲ್ಸ್ ವಿರುದ್ಧ 4 ಓವರ್ ಬೌಲಿಂಗ್ ಮಾಡಿದ್ದ ಕಾರ್ತಿಕೇಯ 9 ಡಾಟ್ ಬಾಲ್ ಮಾಡಿ, ಕೇವಲ ಒಂದು ಬೌಂಡರಿ ಮಾತ್ರ ಬಿಟ್ಟುಕೊಟ್ಟಿದ್ದರು. ತಮ್ಮ ಐಪಿಎಲ್ ಪದಾರ್ಪಣೆ ಬಗ್ಗೆ ಮಾತನಾಡಿ, ನಾನೊಬ್ಬ ಮಿಸ್ಟರಿ ಬೌಲರ್, ಮೊದಲು ನಾನು ಈ ಪಂದ್ಯದಲ್ಲಿ ಆಡುತ್ತೇನೆ ಎಂದಾಗ ನರ್ವಸ್ ಆಗಿದ್ದೆ, ಈಗ ಆರಾಮವಾಗಿದ್ದೇನೆ.
ಆದರೆ, ನಾನು ಪ್ರತಿಯೊಬ್ಬ ಬ್ಯಾಟರ್ಗೆ ಹಿಂದಿನ ರಾತ್ರಿಯೇ ಯೋಜನೆ ರೂಪಿಸಿಕೊಂಡಿದ್ದೆ. ನಾನು ಸಂಜು ಬ್ಯಾಟಿಂಗ್ ಮಾಡುವಾಗ ಪ್ಯಾಡ್ಗೆ ಬೌಲಿಂಗ್ ಮಾಡಲು ಪ್ರಯತ್ನಿಸುತ್ತಿದ್ದೆ. ಸಚಿನ್ ಸರ್ ಸಲಹೆಗಳು ನನ್ನಲ್ಲಿ ಆತ್ಮವಿಶ್ವಾವನ್ನು ಹೆಚ್ಚಿಸಿತು. ನನಗೆ ನನ್ನ ತಂಡ ಗೆಲ್ಲಬೇಕಿತ್ತು ಎಂದು ಅವರು ಇನ್ನಿಂಗ್ಸ್ ಬ್ರೇಕ್ ವೇಳೆ ತಿಳಿಸಿದ್ದಾರೆ.
ಇದನ್ನೂ ಓದಿ:ಫುಟ್ಬಾಲ್ಗೆ ರೊನಾಲ್ಡೊ, ಕ್ರಿಕೆಟ್ಗೆ ಕೊಹ್ಲಿ.. ಇಬ್ಬರು 'ಬಿಗ್ಬ್ರ್ಯಾಂಡ್' ಎಂದ ಇಂಗ್ಲೆಂಡ್ ಮಾಜಿ ನಾಯಕ