ದುಬೈ:ಶ್ರೀಲಂಕಾದ ಸ್ಪಿನ್ನರ್ ವನಿಂದು ಹಸರಂಗ ಐಸಿಸಿ ಬಿಡುಗಡೆ ಮಾಡಿದ ಪುರುಷರ T20I ಆಟಗಾರರ ಬೌಲರ್‌ಗಳ ಶ್ರೇಯಾಂಕ ಪಟ್ಟಿಯಲ್ಲಿ ಮತ್ತೆ ನಂ.1 ಸ್ಥಾನವನ್ನು ಪಡೆದಿದ್ದಾರೆ. ಭಾರತದ ಸೂರ್ಯಕುಮಾರ್ ಯಾದವ್ ಅವರು ಶ್ರೇಯಾಂಕ ಪಟ್ಟಿಯಲ್ಲಿ ಅಗ್ರ ಬ್ಯಾಟರ್ ಆಗಿ ತಮ್ಮ ಸ್ಥಾನವನ್ನು ಈ ವಾರವೂ ಬಲಪಡಿಸಿಕೊಂಡಿದ್ದಾರೆ.
ICC ಪುರುಷರ T20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧ 23 ರನ್‌ಗಳಿಗೆ ಎರಡು ವಿಕೆಟ್‌ಗಳನ್ನು ಪಡೆದಿದ್ದ ಹಸರಂಗ, ತಮ್ಮ ಒಟ್ಟು 5 ಪಂದ್ಯಗಳಲ್ಲಿ 15 ವಿಕೆಟ್ ಕಬಳಿಸುವ ಮೂಲಕ ಹೆಚ್ಚು ವಿಕೆಟ್ ಪಡೆದ ಸ್ಪಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಮೊದಲ ಸ್ಥಾನದಲ್ಲಿದ್ದ ಅಫ್ಘಾನಿಸ್ತಾನದ ಮತ್ತೊಬ್ಬ ಲೆಗ್-ಸ್ಪಿನ್ನರ್ ರಶೀದ್ ಖಾನ್ ಅವರನ್ನು ಹಿಂದಿಕ್ಕಿದ್ದಾರೆ.
ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಓಮನ್‌ನಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ಹಸರಂಗ ಮೊದಲ ಬಾರಿಗೆ ಅಗ್ರಸ್ಥಾನವನ್ನು ವಶಪಡಿಸಿಕೊಂಡಿದ್ದರು.
ಟಿ20 ವಿಶ್ವಕಪ್‌ನಲ್ಲಿ 225 ರನ್ ಕಲೆಹಾಕಿರುವ ಸೂರ್ಯಕುಮಾರ್ ಯಾದವ್, ಬಾಂಗ್ಲಾದೇಶ ವಿರುದ್ಧ 30 ರನ್, ಜಿಂಬಾಬ್ವೆ ವಿರುದ್ಧ 25 ಎಸೆತಗಳಲ್ಲಿ 61 ರನ್ ಸಿಡಿಸಿದ್ದರು. ಒಟ್ಟು 6 ಪಾಯಿಂಟ್ಸ್ ಏರಿಕೆಗೊಂಡು ತನ್ನ ವೃತ್ತಿಜೀವನದ ಬೆಸ್ಟ್ 869 ಪಾಯಿಂಟ್ಸ್ ಕಲೆಹಾಕಿದ್ದಾರೆ. ಈ ಮೂಲಕ ಪಾಕಿಸ್ತಾನದ ವಿಕೆಟ್ ಕೀಪರ್ ಬ್ಯಾಟರ್ ಮೊಹಮ್ಮದ್ ರಿಜ್ವಾನ್‌ಗಿಂತ 39 ಪಾಯಿಂಟ್ಸ್ ಹೆಚ್ಚು ಗಳಿಸಿದ್ದಾರೆ.
ಸೂರ್ಯಕುಮಾರ್‌ಗಿಂತ 90 ಪಾಯಿಂಟ್ಸ್ ಕಡಿಮೆ ಇರುವ ನ್ಯೂಜಿಲ್ಯಾಂಡ್ ಆಟಗಾರ ಡೆವೊನ್ ಕಾನ್ವೆ 3ನೇ ಸ್ಥಾನದಲ್ಲಿದ್ದು, ಈತನಿಗಿಂತ 7 ಪಾಯಿಂಟ್ಸ್ ಕಡಿಮೆ ಇರುವ ಪಾಕ್ ತಂಡದ ನಾಯಕ ಬಾಬರ್ ಅಜಮ್ 4ನೇ ಸ್ಥಾನ ಪಡೆದಿದ್ದಾರೆ.
ಅಫ್ಘಾನಿಸ್ತಾನ ವಿರುದ್ಧ ತಲಾ ಎರಡು ವಿಕೆಟ್ ಪಡೆದ ಆಸ್ಟ್ರೇಲಿಯಾ ಬೌಲರ್‌ಗಳಾದ ಜೋಶ್ ಹೇಜಲ್‌ವುಡ್ ಮತ್ತು ಆಡಮ್ ಝಂಪಾ ಅವರು ಅಗ್ರ 10 ರೊಳಗೆ ಏರಿದ್ದಾರೆ. ಹ್ಯಾಜಲ್‌ವುಡ್ ಒಂದು ಸ್ಥಾನ ಮೇಲೇರಿ ಮೂರನೇ ಸ್ಥಾನಕ್ಕೆ ತಲುಪಿದ್ದರೆ, ಝಂಪಾ ಏಳನೇ ಸ್ಥಾನದಿಂದ ಐದನೇ ಸ್ಥಾನಕ್ಕೆ ತಲುಪಿದ್ದಾರೆ. ಇಂಗ್ಲೆಂಡಿನ ಸ್ಪಿನ್ನರ್ ಆದಿಲ್ ರಶೀದ್ ಕೂಡ ಟಾಪ್ 10ರಲ್ಲಿ ಸ್ಥಾನ ಪಡೆದಿದ್ದು, ಭಾರತದ ರವಿಚಂದ್ರನ್ ಅಶ್ವಿನ್ ಜಿಂಬಾಬ್ವೆಯ ಮೂರು ವಿಕೆಟ್ ಕಬಳಿಸಿ 5 ಸ್ಥಾನ ಮೇಲೇರಿ 13ನೇ ಸ್ಥಾನಕ್ಕೆ ತಲುಪಿದ್ದಾರೆ.