ಹೈದರಾಬಾದ್:ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧ ನಾಳೆ ಇಲ್ಲಿ ನಡೆಯುವ ಮೂರನೇ ಟಿ20 ಪಂದ್ಯ ಉಭಯ ತಂಡಗಳಿಗೆ ನಿರ್ಣಾಯಕ ಪಂದ್ಯವಾಗಿದೆ. ಇಲ್ಲಿ ಗೆಲ್ಲುವ ತಂಡಕ್ಕೆ ಸರಣಿ ಧಕ್ಕಲಿದೆ. ಬಲಿಷ್ಠ ಬ್ಯಾಟಿಂಗ್ ಪಡೆ ಹೊಂದಿರುವ ಭಾರತಕ್ಕೆ ಬೌಲರ್ಗಳದ್ದೇ ಚಿಂತೆಯಾಗಿದೆ.
ಮೊಹಾಲಿಯಲ್ಲಿ ನಡೆದ ಮೊದಲ ಪಂದ್ಯದಲ್ಲಿ 200 ಕ್ಕೂ ಅಧಿಕ ರನ್ ಗಳಿಸಿದಾಗ್ಯೂ ಭಾರತ ಬೌಲರ್ಗಳ ದಯನೀಯ ಪ್ರದರ್ಶನದಿಂದ ಹೀನಾಯ ಸೋಲು ಕಂಡಿತ್ತು. ನಾಗಪುರದಲ್ಲಿ ಮಳೆ ಕಾರಣಕ್ಕೆ 8 ಓವರ್ಗಳಿಗೆ 2ನೇ ನಡೆದ ಪಂದ್ಯದಲ್ಲಿ ಬ್ಯಾಟರ್ಗಳ ಪರಾಕ್ರಮದಿಂದ ತಂಡ ಗೆಲುವು ಸಾಧಿಸಿ ಸರಣಿಯನ್ನು 1-1 ರಲ್ಲಿ ಸಮಬಲ ಸಾಧಿಸಿದೆ. ಹೈದರಾಬಾದ್ನಲ್ಲಿ ನಡೆಯುವ ಕೊನೆಯ, ಮೂರನೇ ಪಂದ್ಯ ನಿರ್ಣಾಯಕವಾಗಿದೆ.
ಹರ್ಷಲ್, ಚಹಲ್ ಮೇಲೆ ಕಣ್ಣು: ಟಿ20 ವಿಶ್ವಕಪ್ಗೆ ಸಿದ್ಧತೆ ನಡೆಸುತ್ತಿರುವ ಭಾರತ, ತನ್ನ ಪಾಳಯದ ನಂಬಿಕಸ್ಥ ಬೌಲರ್ಗಳಾದ ವೇಗಿ ಹರ್ಷಲ್ ಪಟೇಲ್, ಸ್ಪಿನ್ ಅಸ್ತ್ರ ಯಜುವೇಂದ್ರ ಚಹಲ್ ಆಟದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಆಸ್ಟ್ರೇಲಿಯಾ ವಿರುದ್ಧದ ಕಳೆದೆರಡು ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡುತ್ತಿರುವ ಹರ್ಷಲ್ ಪಟೇಲ್ ದುಬಾರಿಯಾಗುತ್ತಿದ್ದಾರೆ.
ಏಷ್ಯಾಕಪ್ನಲ್ಲಿಯೂ ಅಷ್ಟೇನೂ ಉತ್ತಮವಾಗಿ ಆಟವಾಡದ ಯಜುವೇಂದ್ರ ಚಹಲ್ ಮೇಲೆ ನಿರೀಕ್ಷೆ ದುಪ್ಪಟ್ಟಾಗಿದೆ. ನಿನ್ನೆಯ ಪಂದ್ಯದಲ್ಲಿ ಇನ್ನೊಬ್ಬ ಸ್ಪಿನ್ನರ್ ಅಕ್ಸರ್ ಪಟೇಲ್ 2 ವಿಕೆಟ್ ಉರುಳಿಸಿದರೆ, ಚಹಲ್ ಒಂದೇ ಒಂದ ವಿಕೆಟ್ ಪಡೆದಿಲ್ಲ. ಪ್ರಮುಖ ಸ್ಪಿನ್ನರ್ ಎಂದೇ ಗುರುತಿಸಿಕೊಂಡ ಚಹಲ್ ಮೇಲೆ ಭಾರೀ ಒತ್ತಡವಿದೆ.
ಬೂಮ್ರಾ ರೆಡಿ, ಒತ್ತಡದಲ್ಲಿ ಭುವಿ:ಭಾರತದ ಮುಂಚೂಣಿ ವೇಗಿಗಳಲ್ಲಿ ಒಬ್ಬರಾದ ಭುವನೇಶ್ವರ್ ಕುಮಾರ್ ಏಷ್ಯಾಕಪ್ನಲ್ಲಿ ದಂಡನೆಗೆ ಒಳಗಾಗಿದ್ದರು. ಅದಾದ ಬಳಿಕ ಆಸ್ಟ್ರೇಲಿಯಾ ವಿರುದ್ಧದ ಮೊದಲ ಪಂದ್ಯದಲ್ಲಿ ದುಬಾರಿಯಾಗಿದ್ದರು. ಗಾಯಗೊಂಡು ತಂಡಕ್ಕೆ ವಾಪಸ್ ಆಗಿರುವ ಜಸ್ಪ್ರೀತ್ ಬೂಮ್ರಾ ಯಾರ್ಕರ್ ಎಸೆದು ಬ್ಯಾಟ್ಸಮನ್ಗಳ ದಿಕ್ಕೆಡಿಸಿದ್ದರು.
ಜಸ್ಪ್ರೀತ್ ಬೂಮ್ರಾ ಬೌಲಿಂಗ್ ನೇತೃತ್ವವನ್ನು ವಹಿಸಿಕೊಂಡರೂ, ಡೆತ್ಓವರ್ಗಳಲ್ಲಿ ಭುವನೇಶ್ವರ್ ಕುಮಾರ್ ಬೂಮ್ರಾಗೆ ಸಾಥ್ ನೀಡಬೇಕಿದೆ. ಅವರ ಭರ್ಜರಿ ಕಮ್ಬ್ಯಾಕ್ಗಾಗಿ ಅಭಿಮಾನಿಗಳೂ ಎದುರು ನೋಡುತ್ತಿದ್ದಾರೆ. ಆಸೀಸ್ ವಿರುದ್ಧ 2 ಪಂದ್ಯಗಳಾಡಿದರೂ ಹರ್ಷಲ್ ಪಟೇಲ್ ಒಂದು ವಿಕೆಟ್ ಕೂಡ ಸಂಪಾದಿಸಿಲ್ಲ. ಇದು ತಂಡದ ತಲೆನೋವಿಗೆ ಕಾರಣವಾಗಿದೆ.
ಭಾರತದ ಬ್ಯಾಟರ್ಗಳಿಗೆ ಅಡ್ಡಿ ಯಾರು?:ಭಾರತದ ಬ್ಯಾಟಿಂಗ್ ವಿಭಾಗದ ಸಾಮರ್ಥ್ಯ ಪ್ರಶ್ನಿಸುವಂತಿಲ್ಲ. ಆಸೀಸ್ ವಿರುದ್ಧದ ಮೊದಲ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಫೇಲ್ ಆದರೂ, ಕೆ ಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯಾ ಬ್ಯಾಟ್ ಸದ್ದು ಮಾಡಿತ್ತು.
2ನೇ ಪಂದ್ಯದಲ್ಲಿ ರೋಹಿತ್ ಶರ್ಮಾ, ರಾಹುಲ್, ವಿರಾಟ್, ಕೊನೆಯಲ್ಲಿ ದಿನೇಶ್ ಕಾರ್ತಿಕ್ ಸಿಡಿದು ತಾವು ಯಾರಿಗೂ ಬಗ್ಗಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದರು. ಭಾರತ ತಂಡಕ್ಕೆ ಬ್ಯಾಟಿಂಗ್ ವಿಭಾಗವೇ ಬಲ ಎಂಬುದನ್ನು ಸಾಬೀತು ಮಾಡಿದ್ದರು.