ಮೀರ್‌ಪುರ್:ಬಾಂಗ್ಲಾದೇಶ-ಭಾರತ ಮಹಿಳೆಯರ ನಡುವಿನ 3ನೇ ಏಕದಿನ ಪಂದ್ಯದಲ್ಲಿ ಅಂಪೈರಿಂಗ್ ವಿರುದ್ಧ ಟೀಕೆ ಕೇಳಿ ಬಂದಿದೆ. ಮೈದಾನದ ಅಂಪೈರ್ಗಳ ಎಡವಟ್ಟಿಗೆ ಭಾರತ ತಂಡದ ನಾಯಕಿ ಹರ್ಮನ್ಪ್ರೀತ್ ಕೌರ್, ಉಪನಾಯಕಿ ಸ್ಮೃತಿ ಮಂಧಾನ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ಇನ್ನು ಮುಂದಿನ ಸರಣಿಯಲ್ಲಿ ತಾವು ಇದಕ್ಕೆಲ್ಲ ಮಾನಸಿಕವಾಗಿ ಸಜ್ಜಾಗಿಯೇ ಬರುತ್ತೇವೆ" ಎಂದು ಗರಂ ಆಗಿದ್ದಾರೆ.
ಮೀರ್ಪುರ್ನಲ್ಲಿ ನಡೆದ ಪಂದ್ಯದಲ್ಲಿ ಗೆಲ್ಲುವ ಹಂತದಲ್ಲಿದ್ದ ಭಾರತ ಮಹಿಳೆಯರು ಕೊನೆಯಲ್ಲಿ ಮಾಡಿಕೊಂಡ ಪ್ರಮಾದದಿಂದಾಗಿ ಪಂದ್ಯ ಟೈ ಆಗಿ, ಮೂರು ಪಂದ್ಯಗಳ ಸರಣಿ 1-1ರಲ್ಲಿ ಸಮಬಲವಾಯಿತು. ಇದಕ್ಕೆಲ್ಲ ಮೈದಾನದ ಅಂಪೈರ್‌ಗಳು ಮಾಡಿದ ತಪ್ಪು ನಿರ್ಧಾರಗಳು ಕಾರಣವಾಗಿವೆ. ಇದು ಭಾರತ ತಂಡದ ನಾಯಕಿ ಹರ್ಮನ್ಪ್ರೀತ್ ಕೌರ್, ಉಪನಾಯಕಿ ಸ್ಮೃತಿ ಮಂಧಾನ ಅವರನ್ನು ಕೆರಳಿಸಿದ್ದು, ಕೆಟ್ಟ ಅಂಪೈರಿಂಗ್ ವಿರುದ್ಧ ಕಿಡಿಕಾರಿದ್ದಾರೆ.
ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ 49.3 ಓವರ್ಗಳಲ್ಲಿ 225 ರನ್‌ಗಳಿಗೆ ಆಲೌಟ್ ಆಯಿತು. ಇದು ಭಾರತದ ವಿರುದ್ಧ ಗಳಿಸಿದ ಅತ್ಯಧಿಕ ಮೊತ್ತ. ಇದಕ್ಕೆ ಪ್ರತಿಯಾಗಿ ಭಾರತ ವನಿತೆಯರು 225 ರನ್ಗಳಿಸಿದರು. ಇದರಿಂದ ಪಂದ್ಯ ಟೈ ಆಯಿತು. 4 ವಿಕೆಟ್‌ಗೆ 191 ಗಳಿಸಿದ್ದ ಭಾರತ ಕೊನೆಯ 34 ರನ್ ಗಳಿಸುವಷ್ಟರಲ್ಲಿ ದಿಢೀರ್ ಕುಸಿತ ಕಂಡು 6 ವಿಕೆಟ್ ಕಳೆದುಕೊಂಡಿತು. ಸ್ಮೃತಿ ಮಂಧಾನ 59, ಹರ್ಲಿನ್ ಡಿಯೋಲ್ 77, ಜೆಮಿಮಾ ರೋಡ್ರಿಗಸ್ 33 ರನ್ ಗಳಿಸಿದಾಗ್ಯೂ ಪಂದ್ಯ ಗೆಲ್ಲಲಾಗಲಿಲ್ಲ.
ಅಂಪೈರಿಂಗ್ ವಿರುದ್ಧ ಆಕ್ರೋಶ:ಪಂದ್ಯದ ಬಳಿಕ ಪ್ರಶಸ್ತಿ ಪ್ರದಾನ ವೇದಿಕೆ ಮೇಲೆಯೇ ಅಂಪೈರಿಂಗ್ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನಾಯಕಿ ಹರ್ಮನ್ಪ್ರೀತ್ ಕೌರ್, "ನಮ್ಮ ಈ ಪ್ರದರ್ಶನದಿಂದ ಸಾಕಷ್ಟು ಕಲಿಯುವ ಅಗತ್ಯವಿದೆ ಎಂದೆನಿಸುತ್ತದೆ. ಕ್ರಿಕೆಟ್‌ನ ಹೊರತಾಗಿ ಅಂಪೈರಿಂಗ್ ನನಗೆ ತುಂಬಾ ಆಶ್ಚರ್ಯ ತಂದಿದೆ. ಇದೊಂದು ಕೆಟ್ಟ ಅಂಪೈರಿಂಗ್" ಎಂದು ಟೀಕಿಸಿದರು.
"ಮುಂದಿನ ಬಾರಿ ಬಾಂಗ್ಲಾದೇಶ ಪ್ರವಾಸಕ್ಕೆ ಬಂದಾಗ ಈ ರೀತಿಯ ಅಂಪೈರಿಂಗ್‌ಗೆ ಸಜ್ಜಾಗಿರುತ್ತೇವೆ. ಅದಕ್ಕೆ ತಕ್ಕಂತೆ ನಮ್ಮನ್ನು ಸಿದ್ಧಪಡಿಸಿಕೊಳ್ಳುತ್ತೇವೆ" ಎಂದು ಫೀಲ್ಡ್ ಅಂಪೈರ್‌ಗಳಾಗಿದ್ದ ಮೊಹಮ್ಮದ್ ಕಮ್ರುಜ್ಜಮಾನ್ ಮತ್ತು ತನ್ವಿರ್ ಅಹ್ಮದ್ ಅವರ ವಿರುದ್ಧ ಟೀಕಾಪ್ರಹಾರ ಮಾಡಿದರು.