ನವದೆಹಲಿ:ಮುಂದಿನ ವರ್ಷ ನಡೆಯಲಿರುವ ಹಾಂಕಾಂಗ್‌ನ ಫೇರ್ ಬ್ರೇಕ್ ಟಿ20 ಆಹ್ವಾನಿತ ಟೂರ್ನಿಯಲ್ಲಿ ಭಾರತ ಮಹಿಳಾ ಟಿ20 ನಾಯಕಿ ಹರ್ಮನ್‌ಪ್ರೀತ್ ಕೌರ್ ಒಂದು ತಂಡವನ್ನು ಮುನ್ನಡೆಸಲಿದ್ದಾರೆ.
ಫೇರ್‌ಬ್ರೇಕ್ ಟ್ವಿಟರ್‌ನಲ್ಲಿ ಈ ಸುದ್ದಿಯನ್ನು ಖಚಿತಪಡಿಸಿದೆ. ಈ ಕುರಿತು ಟ್ವೀಟ್ ಮಾಡಿರುವ ಫೇರ್ ಬ್ರೇಕ್ "ಫೇರ್‌ಬ್ರೇಕ್‌ನ ಮೊದಲ ಆಹ್ವಾನಿತ ಟಿ-20 ಟೂರ್ನಮೆಂಟ್‌ನಲ್ಲಿ ಹರ್ಮನ್‌ಪ್ರೀತ್ ಕೌರ್ ಆರು ತಂಡಗಳಲ್ಲಿ ಒಂದಕ್ಕೆ ನಾಯಕಿಯಾಗಲಿದ್ದಾರೆ ಎಂದು ಘೋಷಿಸಲು ಫೇರ್‌ಬ್ರೇಕ್ ಉತ್ಸುಕವಾಗಿದೆ" ಎಂದು ಟ್ವೀಟ್ ಮಾಡಿದೆ.
ಈ ಟ್ವೀಟ್‌ಗೆ ಹರ್ಮನ್‌ಪ್ರೀತ್ ರೀ ಟ್ವೀಟ್ ಮಾಡಿದ್ದು, "ನಿಜವಾಗಿಯೂ ಮುಂಬರುವ ಟೂರ್ನಿಗಾಗಿ ಎದುರು ನೋಡುತ್ತಿದ್ದೇನೆ" ಎಂದು ಬರೆದುಕೊಂಡಿದ್ದಾರೆ. ಮೇ 1ರಿಂದ 15ರವರೆಗೆ ಹಾಂಕಾಂಗ್‌ನಲ್ಲಿ ಈ ಟೂರ್ನಿ ನಡೆಯಲಿದೆ. ಈ ಟೂರ್ನಿಯಲ್ಲಿ ಆರು ತಂಡಗಳು ಭಾಗಿಯಾಗಲಿದ್ದು, ವಿಶ್ವದ ಅಗ್ರಮಾನ್ಯ ಆಟಗಾರ್ತಿಯರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಪಂದ್ಯಾವಳಿಯು ಮಹಿಳಾ ಕ್ರಿಕೆಟ್ ಇತಿಹಾಸದಲ್ಲಿ ವಿಶ್ವದ ಮೊದಲ ಖಾಸಗಿ ಅನುದಾನಿತ ಪಂದ್ಯಾವಳಿಯಾಗಿದೆ
ಹರ್ಮನ್‌ಪ್ರೀತ್ ಟಿ-20 ಫಾರ್ಮೆಟ್ನಲ್ಲಿ ಹೆಚ್ಚು ಬೇಡಿಕೆಯಿರುವ ಆಟಗಾರ್ತಿಯಾಗಿದ್ದಾರೆ. ಅವರು ಪ್ರಸ್ತುತ ಮಹಿಳಾ ಬಿಗ್ ಬ್ಯಾಷ್ ಲೀಗ್‌ನಲ್ಲಿ ಆಸ್ಟ್ರೇಲಿಯಾದ ಮೆಲ್ಬೋರ್ನ್ ರೆನೆಗೇಡ್ಸ್ ಪರ ಆಡುತ್ತಿದ್ದಾರೆ. ಸ್ಫೋಟಕ ಬಲಗೈ ಬ್ಯಾಟರ್ ಈ ವರ್ಷದ ಆರಂಭದಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ 'ದಿ ಹಂಡ್ರೆಡ್' ಉದ್ಘಾಟನಾ ಋತುವಿನಲ್ಲಿ ಸಹ ಭಾಗವಹಿಸಿದ್ದರು.