ನವದೆಹಲಿ:ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಇಂದು 35ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅಂತಾರಾಷ್ಟ್ರೀಯಾ ಮಹಿಳಾ ದಿನದಂದೇ ಜನ್ಮದಿನ ಆಚರಿಸಿಕೊಳ್ಳುತ್ತಿರುವ ಕೌರ್ ದೇಶ ಕಂಡ ಯಶಸ್ವಿ ಕ್ರಿಕೆಟರ್. ವೃತ್ತಿ ಜೀವನದಲ್ಲಿ 100ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿರುವ ಇವರು ಹಲವು ದಾಖಲೆಗಳನ್ನು ತಮ್ಮ ಹೆಸರಿನಲ್ಲಿ ಗುರುತು ಮಾಡಿದ್ದಾರೆ.
2009ರಲ್ಲಿ ಕ್ರಿಕೆಟ್ ವೃತ್ತಿಜೀವನ ಪ್ರಾರಂಭಿಸಿದ ಹರ್ಮನ್‌ಪ್ರೀತ್ ಅವರು ವಿರಾಟ್ ಕೊಹ್ಲಿ ದಾಖಲೆಗಳನ್ನು ಮುರಿದಿದ್ದಾರೆ. ಪ್ರಸ್ತುತ ಚೊಚ್ಚಲ ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ(WPL) ಮುಂಬೈ ಇಂಡಿಯನ್ಸ್ ತಂಡದ ಸಾರಥ್ಯ ವಹಿಸಿಕೊಂಡಿದ್ದು, ಎರಡು ಪಂದ್ಯವನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ನಾಳೆ ಮುಂಬೈಗೆ ಮೂರನೇ ಪಂದ್ಯವಿದ್ದು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ.
ಮುಂಬೈ ಪಾಳಯದಲ್ಲಿ ಖುಷಿ:ನಿನ್ನೆ ರಾತ್ರಿ ನಾಯಕಿಯ ಜನ್ಮದಿನವನ್ನು ಭರ್ಜರಿಯಾಗಿಯೇ ಮುಂಬೈ ಇಂಡಿಯನ್ಸ್ ತಂಡ ಆಚರಿಸಿದೆ. ಕ್ಯಾಪ್ಟನ್ ಹರ್ಮನ್‌ಪ್ರೀತ್ ಕೌರ್ ಮುಂಬೈ ತಂಡದ ಎಲ್ಲಾ ಆಟಗಾರರೊಂದಿಗೆ ಕೇಕ್ ಕತ್ತರಿಸುವ ಮೂಲಕ ಸಂಭ್ರಮಿಸಿದ್ದಾರೆ. ಮುಂಬೈ ಇಂಡಿಯನ್ಸ್ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ನಲ್ಲಿ ಸೆಲೆಬ್ರೇಷನ್ನ ವಿಡಿಯೋ ಹಂಚಿಕೊಂಡಿದೆ. ಇದರಲ್ಲಿ ಹರ್ಮನ್‌ಪ್ರೀತ್ ಅವರು ಕೇಕ್ ಕತ್ತರಿಸಿ ತಂಡದ ಎಲ್ಲಾ ಆಟಗಾರರಿಗೆ ತಿನ್ನಿಸುತ್ತಿರುವುದನ್ನು ನೋಡಬಹುದು. ಕೇಕ್ ಕತ್ತರಿಸಿದ ನಂತರ ಎಲ್ಲ ಆಟಗಾರರು ಸೇರಿ ಡ್ಯಾನ್ಸ್ ಮಾಡಿದ್ದಾರೆ. ಭಾರತದ ಮಹಿಳಾ ತಂಡದ ನಾಯಕಿಗೆ ಹಲವು ಕ್ರಿಕೆಟಿಗರು ಶುಭ ಕೋರಿದ್ದಾರೆ.
ಹರ್ಮನ್‌ಪ್ರೀತ್ ಕೌರ್ 8 ಮಾರ್ಚ್ 1989 ರಂದು ಪಂಜಾಬ್‌ನ ಮೋಗಾ ಜಿಲ್ಲೆಯಲ್ಲಿ ಜನಿಸಿದರು. ತಂದೆ ಹರ್ಮಂದರ್ ಸಿಂಗ್ ಭುಲ್ಲರ್ ವಾಲಿಬಾಲ್ ಮತ್ತು ಬಾಸ್ಕೆಟ್‌ಬಾಲ್ ಆಟಗಾರರಾಗಿದ್ದರು. ತಾಯಿಯ ಹೆಸರು ಸತ್ವಿಂದರ್. ಕೌರ್ ಬಾಲ್ಯದಿಂದಲೂ ಕ್ರಿಕೆಟ್‌ನಲ್ಲಿ ವಿಶೇಷ ಆಸಕ್ತಿ ಹೊಂದಿದ್ದರು. ಹರ್ಮನ್ ಭಾರತದ ಮಾಜಿ ಬ್ಯಾಟರ್ ವೀರೇಂದ್ರ ಸೆಹ್ವಾಗ್ ಅವರ ಅಪ್ಪಟ ಅಭಿಮಾನಿ ಕೂಡಾ. ಕೌರ್ ಬ್ಯಾಟಿಂಗ್ ಆಲ್ರೌಂಡರ್ ಆಗಿದ್ದಾರೆ. ಇವರನ್ನು ಐಸಿಸಿ ಮಹಿಳಾ ಏಕದಿನ ವಿಶ್ವಕಪ್ 2022ರಲ್ಲಿ ಟೀಮ್ ಇಂಡಿಯಾದ ಉಪನಾಯಕಿಯನ್ನಾಗಿ ಮಾಡಲಾಯಿತು. 2023ರ ಟಿ20 ವಿಶ್ವಕಪ್‌ನಲ್ಲಿ ತಂಡವನ್ನು ನಾಯಕಿಯಾಗಿ ಮುನ್ನಡೆಸಿ ಸೆಮಿಫೈನಲ್‌ವರೆಗೆ ಕೊಂಡೊಯ್ದಿದ್ದಾರೆ.
ಟಿ20 ಕ್ರಿಕೆಟ್‌ನಲ್ಲಿ ಶತಕ:2017ರ ಏಕದಿನ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಹರ್ಮನ್‌ಪ್ರೀತ್ ಕೌರ್ 115 ಬಾಲ್ ಎದುರಿಸಿ 20 ಬೌಂಡರಿ ಮತ್ತು 7 ಸಿಕ್ಸ್ನಿಂದ 171 ರನ್‌ಗಳ ಬಿರುಸಿನ ಅಜೇಯ ಇನ್ನಿಂಗ್ಸ್ ಕಟ್ಟಿದ್ದರು. ಈ ಇನ್ನಿಂಗ್ಸ್‌ನಿಂದ ಟೀಂ ಇಂಡಿಯಾ 42 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 281 ರನ್ ಗಳಿಸಿತ್ತು. 2018 ರ ಟಿ20 ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ 51 ಎಸೆತಗಳಲ್ಲಿ 7 ಬೌಂಡರಿ ಮತ್ತು 8 ಸಿಕ್ಸರ್‌ಗಳಿಂದ 103 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದ್ದರು. ಈ ಶತಕದ ಮೂಲಕ ಕೌರ್ ಟಿ20 ಮಾದರಿಯ ಕ್ರಿಕೆಟ್‌ನಲ್ಲಿ 100 ರನ್ ಗಳಿಸಿದ ಮೊದಲ ಭಾರತೀಯ ಮಹಿಳಾ ಕ್ರಿಕೆಟರ್ ಎಂಬ ಹೆಗ್ಗಳಿಕೆ ಹೊಂದಿದ್ದಾರೆ.
ಇದನ್ನೂ ಓದಿ:WPL 2023: ಟಾಸ್ ಗೆದ್ದ ಯುಪಿ ವಾರಿಯರ್ಸ್ ಕ್ಷೇತ್ರ ರಕ್ಷಣೆ ಆಯ್ಕೆ: ಮತ್ತೆ ಚೇಸಿಂಗ್ನಲ್ಲಿ ಗೆಲ್ಲುವ ಗುರಿ