ಸಿಡ್ನಿ :ಮೆಲ್ಬೋರ್ನ್ ರೆನೆಗೇಡ್ಸ್ ತಂಡದ ಸ್ಟಾರ್ ಆಟಗಾರ್ತಿಯಾಗಿರುವ ಭಾರತದ ಹರ್ಮನ್‌ಪ್ರೀತ್ ಕೌರ್ 2021ನೇ ಋತುವಿನ ಮಹಿಳಾ ಬಿಗ್ಬ್ಯಾಷ್ ಕ್ರಿಕೆಟ್ನಲ್ಲಿ ಸರಣಿ ಶ್ರೇಷ್ಠ ಆಟಗಾರ್ತಿಯಾಗಿ ಹೊರ ಹೊಮ್ಮಿದ್ದಾರೆ. ಈ ಮೂಲಕ ವಿದೇಶಿ ಟೂರ್ನಿಯಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ಭಾರತದ ಮೊದಲ ಆಟಗಾರ್ತಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.
ಭಾರತದ ಹರ್ಮನ್ ಪ್ರೀತ್ ಕೌರ್ ಈ ಋತುವಿನ ಬಿಗ್ಬ್ಯಾಷ್ ಟೂರ್ನಿಯಲ್ಲಿ 399 ರನ್ ಸೇರಿದಂತೆ, 15 ವಿಕೆಟ್ಗಳನ್ನು ಪಡೆದುಕೊಂಡು ಆಲ್ರೌಂಡರ್ ಪ್ರದರ್ಶನ ನೀಡಿದ್ದಾರೆ. ಇದಲ್ಲದೇ ಟೂರ್ನಿಯಲ್ಲಿ 18 ಸಿಕ್ಸರ್ಸ್ಗಳನ್ನು ಸಿಡಿಸಿರುವ ಹರ್ಮನ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.
ಭಾರತ ಟಿ-20 ತಂಡದ ನಾಯಕಿ ಹರ್ಮನ್, ತಾವಾಡಿದ ಪ್ರತಿ ಪಂದ್ಯದಲ್ಲಿಯೂ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ನಿರ್ಣಾಯಕರ ಮನ ಗೆದ್ದಿದ್ದಾರೆ. ಟೂರ್ನಿಯಲ್ಲಿ 31 ಮತಗಳನ್ನು ಪಡೆಯುವ ಮೂಲಕ ಪರ್ತ್ ಸ್ಕಾಚರ್ಸ್ ತಂಡದ ಸ್ಟಾರ್ ಆಟಗಾರ್ತಿಯರಾದ ಬೆತ್ ಮೂನಿ ಮತ್ತು ಸೋಫಿ ಡಿವೈನ್‌ರನ್ನು(28 ಮತ) ಹಿಂದಿಕ್ಕುವ ಮೂಲಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಬ್ರಿಸ್ಬೇನ್ ಹೀಟ್‌ನ ಗ್ರೇಸ್ ಹ್ಯಾರಿಸ್ (25 ಮತಗಳು) ಮತ್ತು ಜಾರ್ಜಿಯಾ ರೆಡ್‌ಮೇನ್ (24 ಮತಗಳು), ಹರಿಕೇನ್ಸ್ ಬ್ಯಾಟರ್ ಮಿಗ್ನಾನ್ ಡು ಪ್ರೀಜ್ 24 ಮತಗಳನ್ನು ಮಾತ್ರ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದಲ್ಲದೇ, ಸಿಡ್ನಿ ಥಂಡರ್ಸ್ನ ಫೋಬೆ ಲಿಚ್‌ಫೀಲ್ಡ್ ಬಿಗ್ ಬ್ಯಾಷ್ ಟೂರ್ನಿಯಲ್ಲಿ ಅತ್ಯುತ್ತಮ ಯುವ ಆಟಗಾರ್ತಿ(ಯಂಗ್ ಗನ್) ಪ್ರಶಸ್ತಿಯನ್ನು ಬಾಚಿಕೊಂಡಿದ್ದಾರೆ.
'ತಂಡಕ್ಕೆ ಅಗತ್ಯವಿದ್ದಾಗ ಉತ್ತಮ ಆಟವಾಡಿದ್ದೇನೆ. ನನ್ನ ಈ ಸಾಧನೆಯ ಬಗ್ಗೆ ತುಂಬಾ ಖುಷಿಯಾಗುತ್ತಿದೆ. ತಂಡದ ಸದಸ್ಯರು ಮತ್ತು ಸಹಾಯಕ ಸಿಬ್ಬಂದಿ ನೀಡಿದ ಸಹಕಾರದಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ. ಅವರೆಲ್ಲರಿಗೂ ನನ್ನ ಧನ್ಯವಾದಗಳು' ಎಂದು ಹರ್ಮನ್ ಪ್ರೀತ್ ಕೌರ್ ತಿಳಿಸಿದ್ದಾರೆ.