ಅಹ್ಮದಾಬಾದ್ :ಭಾರತದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ಆಫ್ಘಾನಿಸ್ತಾನ ಸ್ಪಿನ್ ಮಾಂತ್ರಿಕ ರಶೀದ್ ಖಾನ್ ಹಾಗೂ ಭಾರತದ ಉದಯೋನ್ಮುಖ ಬ್ಯಾಟರ್ ಶುಬ್ಮನ್ ಗಿಲ್ರನ್ನು ಅಹ್ಮದಾಬಾದ್ ಫ್ರಾಂಚೈಸಿ ಡ್ರಾಪ್ ಮಾಡಿಕೊಂಡಿದೆ ಎಂದು ವರದಿಗಳಿಂದ ತಿಳಿದು ಬಂದಿದೆ.
ಈಗಾಗಲೇ ಐಪಿಎಲ್ನ 8 ತಂಡಗಳು ತಮಗೆ ಬೇಕಾದ ಆಟಗಾರರನ್ನು ರಿಟೈನ್ ಮಾಡಿಕೊಂಡಿವೆ. ಹೊಸ ತಂಡಗಳಾದ ಲಖನೌ ಮತ್ತು ಅಹ್ಮದಾಬಾದ್ ತಂಡಗಳಿಗೆ ಜನವರಿ 31ರೊಳಗೆ ತಲಾ 3 ಆಟಗಾರರನ್ನು ನೇರವಾಗಿ ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಲಾಗಿತ್ತು.
ಸಿವಿಸಿ ಕ್ಯಾಪಿಟಲ್ಸ್ ಒಡೆತನದ ಅಹ್ಮದಾಬಾದ್ ಫ್ರಾಂಚೈಸಿ ಸ್ಥಳೀಯ ಆಟಗಾರ ಹಾರ್ದಿಕ್ ಪಾಂಡ್ಯರನ್ನು 15 ಕೋಟಿ ರೂ. ನೀಡಿ ತಂಡಕ್ಕೆ ಸೇರಿಸಿಕೊಂಡಿದೆ. ಅವರನ್ನೇ ನಾಯಕನನ್ನಾಗಿ ನೇಮಕ ಮಾಡಿದೆ ಎಂದು ತಿಳಿದು ಬಂದಿದೆ. ಇವರ ಜೊತೆಗೆ ಸನ್ರೈಸರ್ಸ್ ಹೈದರಾಬಾದ್ ತಂಡದಲ್ಲಿದ್ದ ಆಫ್ಘಾನ್ ಸ್ಪಿನ್ನರ್ ರಶೀದ್ ಖಾನ್ಗೂ ಕೂಡ 15 ಕೋಟಿ ರೂ. ನೀಡಿದೆ ಎಂದು ತಿಳಿದು ಬಂದಿದೆ.
ಇನ್ನು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿದ್ದ ಶುಬ್ಮನ್ ಗಿಲ್ರನ್ನು 3ನೇ ರಿಟೈನ್ ಆಗಿ ನೇಮಕ ಮಾಡಿಕೊಳ್ಳಲಾಗಿದೆ. ಅವರಿಗೆ 7 ಕೋಟಿ ರೂ. ನೀಡಲಾಗಿದೆ ಎಂದು ಇಎಸ್ಪಿಎನ್ ವರದಿ ಮಾಡಿದೆ.