ಮುಂಬೈ: ಫಿಟ್ನೆಸ್ ಸಮಸ್ಯೆ ಎದುರಿಸುತ್ತಿರುವ ಭಾರತ ತಂಡದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಬುಧವಾರದಿಂದ ಆರಂಭವಾಗಲಿರುವ ವಿಜಯ್ ಹಜಾರೆ ಟ್ರೋಫಿಯಲ್ಲಿ ಬರೋಡ ತಂಡದ ಆಯ್ಕೆಗೆ ಲಭ್ಯರಿರುವುದಿಲ್ಲ ಎಂದು ತಿಳಿಸಿದ್ದಾರೆ.
ಕಳೆದ ಮೂರು ವರ್ಷಗಳಿಂದ ಬರೋಡ ತಂಡದ ಪರ ಅಪರೂಪಕ್ಕೆ ಒಮ್ಮೆ ಕಾಣಿಸಿಕೊಂಡಿರುವ ಹಾರ್ದಿಕ್ ಪಾಂಡ್ಯ, ತಾವು ಸದ್ಯ ಮುಂಬೈನಲ್ಲಿ ಪುನಶ್ಚೇತನಕ್ಕೆ ಒಳಗಾಗಿರುವುದಾಗಿ ಒಂದು ಸಾಲಿನ ಉತ್ತರ ನೀಡಿದ್ದಾರೆ ಎಂದು ಬರೋಡ ಕ್ರಿಕೆಟ್ ಮಂಡಳಿಯ ಹಿರಿಯ ಅಧಿಕಾರಿ ಪಿಟಿಐಗೆ ಮಾಹಿತಿ ನೀಡಿದ್ದಾರೆ.
ಪಾಂಡ್ಯ ಎದುರಿಸುತ್ತಿರುವ ಗಾಯದ ಬಗ್ಗೆ ಬಿಸಿಎ ಅಧಿಕಾರಿಗಳ ಬಳಿ ಕೇಳಿದ್ದಕ್ಕೆ, ಬಿಸಿಎಗೂ ಕೂಡ ಅವರು ಯಾವ ಗಾಯಕ್ಕೆ ಒಳಗಾಗಿದ್ದಾರೆ ಎಂಬ ಯಾವುದೇ ಮಾಹಿತಿಯಿಲ್ಲ ಎಂದಿದ್ದಾರೆ. ಪಾಂಡ್ಯ 2019ರಲ್ಲಿ ಬೆನ್ನಿನ ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ ಉತ್ತಮ ಆಕಾರ ಪಡೆಯಲು ಶ್ರಮಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಹಾರ್ದಿಕ್ ಅವರ ಅಣ್ಣ ಕೃನಾಲ್ ಪಾಂಡ್ಯ ವಿಜಯ ಹಜಾರೆಗಾಗಿ ಆಯೋಜಿಸಿರುವ ಶಿಬಿರದಲ್ಲಿ ಬರೋಡ ಕ್ರಿಕೆಟ್ ತಂಡವನ್ನು ಸೇರಿಕೊಂಡಿದ್ದಾರೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.
ಈಗಾಗಲೇ ಬಿಸಿಸಿಐ ಆಯ್ಕೆ ಸಮಿತಿ ಹಾರ್ದಿಕ್ ಪಾಂಡ್ಯ ಅವರಿಗೆ ಡೊಮೆಸ್ಟಿಕ್ ಕ್ರಿಕೆಟ್ ಆಡಿ ತಮ್ಮ ಫಿಟ್ನೆಸ್ ಸಾಬೀತು ಪಡಿಸದಿದ್ದರೆ ರಾಷ್ಟ್ರೀಯ ತಂಡದಲ್ಲಿ ಅವಕಾಶ ನೀಡುವುದಿಲ್ಲ ಎಂದು ಹೇಳಿದೆ. ಅವರಿಗಷ್ಟೇ ಅಲ್ಲದೇ ಪ್ರಸ್ತುತ ರಾಷ್ಟ್ರೀಯ ತಂಡದಲ್ಲಿ ಆಡುತ್ತಿರುವ ಎಲ್ಲಾ ಆಟಗಾರರು ವಿಜಯ್ ಹಜಾರೆ ಮತ್ತು ರಣಜಿ ಟೂರ್ನಮೆಂಟ್ ಆಡಬೇಕೆಂದು ಸೂಚಿಸಿದೆ ಎಂದು ಹೇಳಿದೆ.
ಹಾರ್ದಿಕ್ ಪಾಂಡ್ಯ ಟೆಸ್ಟ್ ಕ್ರಿಕೆಟ್ನಲ್ಲಿ ತಮಗೆ ಭವಿಷ್ಯದಲ್ಲಿ ಅವಕಾಶ ಸಿಗುವ ಸಾಧ್ಯತೆ ಕಡಿಮೆ ಎಂದು ಅರಿತುಕೊಂಡಿದ್ದಾರೆ. ಅಲ್ಲದೆ ಏಕದಿನ ಮತ್ತು ಟಿ20 ಯಲ್ಲಿ ಮುಂದುವರಿಯಬೇಕಾದರೂ ಬೌಲಿಂಗ್ ಮಾಡಬೇಕಾಗಿರುವುದು ಕಡ್ಡಾಯವಾಗಿದೆ. ಈಗ ಮುಂಬೈನಲ್ಲಿ ಪುನಶ್ಚೇತನಕ್ಕೆ ಒಳಗಾದರೂ ಕೊನೆಗೆ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಕೋಚ್ಗಳ ಮುಂದೆ ಕಡ್ಡಾಯವಾಗಿ ಫಿಟ್ನೆಸ್ ಸಾಬೀತುಪಡಿಸಬೇಕಾಗಿದೆ.
ಒಂದು ಕಾಲದಲ್ಲಿ ಭಾರತೀಯ ಆಟಗಾರರು ರಾಷ್ಟ್ರೀಯ ತಂಡಕ್ಕೆ ಆಡುವ ಮುನ್ನ ಎನ್ಸಿಎಯಿಂದ ಫಿಟ್ನೆಸ್ ಪ್ರಮಾಣ ಪತ್ರವನ್ನು ಪಡೆಯುವುದಕ್ಕೆ ಮಾತ್ರ ಬಳಸಿಕೊಳ್ಳುತ್ತಿದ್ದರು. ಆದರೆ ರಾಹುಲ್ ದ್ರಾವಿಡ್ ಎನ್ಸಿಎ ಅಧ್ಯಕ್ಷರಾದ ಬಳಿಕ ಆ ಸಂಸ್ಕೃತಿಗೆ ತಿಲಾಂಜಲಿ ಹಾಡಿದರು. ಗಾಯದಿಂದ ಚೇತರಿಸಿಕೊಂಡ ಯಾವುದೇ ಆಟಗಾರನಾದರೂ ಬೆಂಗಳೂರಿಗೆ ಆಗಮಿಸಿ, ಅಕಾಡೆಮಿ ಕೋಚ್ ಮತ್ತು ಫಿಸಿಯೋಗಳ ಮುಂದೆ ತಮ್ಮ ಫಿಟ್ನೆಸ್ ತೋರಿಸಿ ನಂತರ ಪಂದ್ಯವನ್ನಾಡಬೇಕಾಗಿದೆ.
ಇದನ್ನೂ ಓದಿ:ಮುಂಬರುವ ಐಪಿಎಲ್ನಲ್ಲಿ ಪ್ರಸಿದ್ಧ ತಂಡವೊಂದರಲ್ಲಿ ವಿಶೇಷ ಜವಾಬ್ದಾರಿ ನಿರ್ವಹಿಸಲಿದ್ದಾರೆ ಹರ್ಭಜನ್: