ಮೊಹಾಲಿ: ಮಂಗಳವಾರ ಮೊಹಾಲಿಯಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟಿ20 ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ ವೇಗಿ ಜಸ್ಪ್ರೀತ್ ಬುಮ್ರಾ ಕಣಕ್ಕಿಳಿಯುವ ನಿರೀಕ್ಷೆ ಹೊಂದಿದ್ದ ಅಭಿಮಾನಿಗಳಿಗೆ ನಿರಾಶೆಯಾಗಿತ್ತು. ಈ ಕುರಿತು ಪಂದ್ಯದ ಬಳಿಕ ಮಾತನಾಡಿದ ಹಾರ್ದಿಕ್ ಪಾಂಡ್ಯ, "ಜಸ್ಪ್ರೀತ್ ಬುಮ್ರಾ ಮೊದಲ ಪಂದ್ಯದಲ್ಲಿ ಅನಿವಾರ್ಯವಾಗಿ ಹೊರಗುಳಿಯಬೇಕಾಯಿತು. ಗಾಯದ ಸಮಸ್ಯೆಯಿಂದ ಚೇತರಿಸಿಕೊಳ್ತಿದ್ದು ಅವರ ಮೇಲೆ ಯಾವುದೇ ಒತ್ತಡ ಹಾಕುವುದಿಲ್ಲ" ಎಂದರು.
ಬೆನ್ನಿನ ಗಾಯದ ಸಮಸ್ಯೆಯಿಂದಾಗಿ ಇತ್ತೀಚೆಗೆ ನಡೆದ ಏಷ್ಯಾ ಕಪ್ ಟೂರ್ನಿಯಿಂದಲೂ ಬುಮ್ರಾ ಹೊರಬಿದ್ದಿದ್ದರು. ಇದೀಗ ಗಾಯದ ಸಮಸ್ಯೆಯಿಂದ ಗುಣಮುಖರಾಗಿದ್ದು ಟಿ20 ವಿಶ್ವಕಪ್ ಟೂರ್ನಿಗೆ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
"ಜಸ್ಪ್ರೀತ್ ಪಂದ್ಯದಲ್ಲಿ ಆಡದೇ ಇದ್ದಾಗ ದೊಡ್ಡ ವ್ಯತ್ಯಾಸಗಳು ಕಾಣಿಸುತ್ತವೆ ನಿಜ. ಗಾಯದ ಸಮಸ್ಯೆಯಿಂದ ಹಿಂತಿರುಗಿರುವ ಅವರು ತಂಡಕ್ಕೆ ಕಮ್ಬ್ಯಾಕ್ ಆಗಲು ಸಮಯ ತೆಗೆದುಕೊಳ್ಳುತ್ತದೆ. ಹಾಗಂತ ಪ್ರಸ್ತುತ ತಂಡದಲ್ಲಿ ಆಡುತ್ತಿರುವವರನ್ನು ಪ್ರಶ್ನಿಸುವುದು ಸರಿಯಲ್ಲ. ಅವರೆಲ್ಲರೂ ಅತ್ಯುತ್ತಮ ಆಟಗಾರರೇ. ಹಾಗಾಗಿಯೇ ತಂಡದಲ್ಲಿದ್ದಾರೆ" ಎಂದು ಪಾಂಡ್ಯ ಹೇಳಿದರು.
ಸರಣಿಯ ಆರಂಭಿಕ ಪಂದ್ಯದಲ್ಲಿ ಭಾರತ ತಂಡ ನೀಡಿದ್ದ 209 ರನ್‌ಗಳ ಗುರಿ ಬೆನ್ನಟ್ಟಿದ್ದ ಆಸ್ಟ್ರೇಲಿಯಾ ತಂಡಕ್ಕೆ ಕಡಿವಾಣ ಹಾಕುವಲ್ಲಿ ಅಕ್ಷರ್ ಪಾಟೀಲ್ ಹೊರತುಪಡಿಸಿ ಉಳಿದ ಬೌಲರ್ಗಳು ವಿಫಲರಾಗಿದ್ದು ಆಸ್ಟ್ರೇಲಿಯಾ ತಂಡ ಚೊಚ್ಚಲ ಟಿ20 ಪಂದ್ಯದಲ್ಲಿ ಸುಲಭ ಜಯ ಸಾಧಿಸಿದೆ.
ಇದನ್ನೂ ಓದಿ:ಆಸ್ಟ್ರೇಲಿಯಾ ವಿರುದ್ಧ ಸೋಲು: ಬೌಲರ್ಗಳ ವಿರುದ್ಧ ಹರಿಹಾಯ್ದ ರೋಹಿತ್ ಶರ್ಮಾ