ತರೌಬಾ (ಟ್ರಿನಿಡಾಡ್ ಮತ್ತು ಟೊಬಾಗೊ): ಅಕ್ಟೋಬರ್ 5 ರಿಂದ ನವೆಂಬರ್ 19 ರವರೆಗೆ ತವರಿನಲ್ಲಿ ನಡೆಯಲಿರುವ ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ರ ಕಡೆಗೆ ಹೆಚ್ಚು ಗಮನ ಹರಿಸುತ್ತಿದ್ದು, ವಿಶ್ವಕಪ್ ಸಂದರ್ಭದಲ್ಲಿ ಬೌಲಿಂಗ್ನಲ್ಲೂ ಹೆಚ್ಚಿನ ಕೊಡುಗೆ ನೀಡಲು ಬಯಸುತ್ತೇನೆ ಎಂದು ಟೀಮ್ ಇಂಡಿಯಾದ ಸ್ಟಾಂಡ್ ಬೈ ನಾಯಕ ಹಾರ್ದಿಕ್ ಪಾಂಡ್ಯ ಹೇಳಿಕೊಂಡಿದ್ದಾರೆ. ಈ ಮೂಲಕ ವೇಗ ಆಲ್ರೌಂಡ್ ಸ್ಥಾನವನ್ನು ತಂಡದಲ್ಲಿ ತುಂಬುವ ಬಗ್ಗೆ ಭರವಸೆ ವ್ಯಕ್ತಪಡಿಸಿದ್ದಾರೆ.
ಆದರೆ ಈ ಬಗ್ಗೆ ಹೇಳುವಾಗ ನಾನು ಈಗ ಇದರಲ್ಲಿ ಆಮೆಯ ಗತಿಯಲ್ಲಿದ್ದೇನೆ ಮೊಲದಷ್ಟು ವೇಗಿ ಆಗಿಲ್ಲ ಎಂದು ಹೇಳಿಕೊಂಡಿದ್ದಾರೆ. ಎರಡನೇ ಏಕದಿನ ಕ್ರಿಕೆಟ್ನಲ್ಲಿ ನಾಯಕ ರೋಹಿತ್ ಶರ್ಮಾರ ವಿಶ್ರಾಂತಿಯ ವೇಳೆ ಸ್ಟಾಂಡ್ ಬೈ ನಾಯಕರಾಗಿ ಕಾರ್ಯ ನಿರ್ವಹಿಸಿದ್ದ ಮತ್ತು ವಿಂಡೀಸ್ ವಿರುದ್ಧದ 5 ಟಿ20 ಸರಣಿಯ ನಾಯಕರಾಗಿರುವ ಹಾರ್ದಿಕ್ ತಂಡದಲ್ಲಿ ಆಲ್ರೌಂಡ್ ಸ್ಥಾನವನ್ನು ತುಂಬುದರ ಜೊತೆಗೆ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ.
ಮೇ 29 ರಂದು ಇಂಡಿಯನ್ ಪ್ರೀಯರ್ ಲೀಗ್ನ ಮುಕ್ತಾಯದ ನಂತರದ ಎರಡು ತಿಂಗಳ ವಿರಾಮದಲ್ಲಿ ಹಾರ್ದಿಕ್ 3 ವಾರಕ್ಕೂ ಹೆಚ್ಚು ಕಾಲ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್ಸಿಎ) ಯಲ್ಲಿ ದೈಹಿಕ ಫಿಟ್ನೆಸ್ಗಾಗಿ ಶ್ರಮಿಸಿದ್ದಾರೆ. ಈ ಹಿಂದೆ ಬೆನ್ನು ನೋವಿನ ಕಾರಣ ಅರ್ಧ ವರ್ಷಕ್ಕೂ ಹೆಚ್ಚು ಕಾಲ ಟೀಮ್ ಇಂಡಿಯಾದಿಂದ ಹೊರಗುಳಿದಿದ್ದರು. ಹೀಗಾಗಿ ಅವರು ಫಿಟ್ನೆಸ್ ಕಡೆ ಹೆಚ್ಚು ಗಮನ ಹರಿಸುತ್ತಿದ್ದಾರೆ.
16ನೇ ಆವೃತ್ತಿಯ 2023ರ ಐಪಿಎಲ್ನಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟಾನ್ಸ್ ರನ್ನರ್ ಅಪ್ ಆಗಿ ಹೊರಹೊಮ್ಮಿತ್ತು. ಈ ಆವೃತ್ತಿಯಲ್ಲಿ ಹಾರ್ದಿಕ್ ಪಾಂಡ್ಯ 16 ಪಂದ್ಯಗಳಲ್ಲಿ 25 ಓವರ್ ಬೌಲ್ ಮಾಡಿದ್ದರು. ವಿಂಡೀಸ್ ಪ್ರವಾಸದಲ್ಲಿ 9.4 ಓವರ್ ಬಾಲ್ ಮಾಡಿದ್ದಾರೆ.