ನವದೆಹಲಿ:ವಿಶ್ವಕಪ್ ಸೆಮಿಫೈನಲ್ ಸೋಲಿನ ಬಳಿಕ ನಡೆಯುವ ಮೊದಲ ದ್ವಿಪಕ್ಷೀಯ ಟಿ20 ಸರಣಿಗೆ ನ್ಯೂಜಿಲ್ಯಾಂಡ್ ಮತ್ತು ಭಾರತ ಸಜ್ಜಾಗುತ್ತಿದ್ದು, ಉಭಯ ತಂಡಗಳು ಭರ್ಜರಿ ತಾಲೀಮು ನಡೆಸುತ್ತಿವೆ. ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ನೇತೃತ್ವದ ತಂಡ ಕಿವೀಸ್ ನಾಡಿನ ವಾತಾವರಣಕ್ಕೆ ಹೊಂದಿಕೊಳ್ಳಬೇಕಿದೆ.
ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದ್ದು, ಉತ್ಸಾಹಿ ತರುಣರೇ ಇರುವ ಭಾರತ ತಂಡ 3 ಪಂದ್ಯಗಳ ಟಿ20 ಪಂದ್ಯವನ್ನಾಡಲಿದೆ. ಯುವಪಡೆ ನವೆಂಬರ್ 18 ರಿಂದ ಕಿವೀಸ್ ತಂಡವನ್ನು ಎದುರಿಸಲಿದೆ. ವೆಲ್ಲಿಂಗ್ಟನ್ನಲ್ಲಿ ಮೊದಲ ಪಂದ್ಯ ನಡೆಯಲಿದೆ. ಮೂರು ಟಿ20 ಪಂದ್ಯಗಳ ಸರಣಿಯ ಬಳಿಕ 3 ಪಂದ್ಯಗಳ ಶಿಖರ್ ಧವನ್ ನೇತೃತ್ವದಲ್ಲಿ ಏಕದಿನ ಸರಣಿಯನ್ನಾಡಲಿದೆ.
ಹಿರಿಯರಿಗೆ ವಿಶ್ರಾಂತಿ, ಕಿರಿಯರಿಗೆ ಅವಕಾಶ:ಸರಣಿಯಲ್ಲಿ ರೋಹಿತ್ ಶರ್ಮಾ, ಕೆಎಲ್ ರಾಹುಲ್ ಮತ್ತು ವಿರಾಟ್ ಕೊಹ್ಲಿ ಸೇರಿದಂತೆ ಹೆಚ್ಚಿನ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ಐರ್ಲೆಂಡ್ ಸರಣಿಯ ಬಳಿಕ ಹಾರ್ದಿಕ್ ಪಾಂಡ್ಯಗೆ ಪೂರ್ಣ ನಾಯಕತ್ವದ ಹೊಣೆ ನೀಡಲಾಗಿದೆ. ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ಯುವಪಡೆ ತನ್ನ ಸಾಮರ್ಥ್ಯ ಸಾಬೀತುಪಡಿಸಬೇಕಿದೆ. ಭವಿಷ್ಯದ ನಾಯಕ ಎಂದೇ ಬಿಂಬಿತವಾಗುತ್ತಿರುವ ಹಾರ್ದಿಕ್ ಪಾಂಡ್ಯಗೆ ಈ ಸರಣಿ ಅಗ್ನಿಪರೀಕ್ಷೆಯೇ ಸರಿ.