ಮುಂಬೈ(ಮಹಾರಾಷ್ಟ್ರ): ಭಾರತದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಯಿಂದ ಹೊರಗುಳಿಯುವ ಸಾಧ್ಯತೆಯಿದೆ. ವಿಶ್ವಕಪ್ ಪಂದ್ಯದಲ್ಲಿ ಪಾದದ ಗಾಯಕ್ಕೆ ತುತ್ತಾಗಿದ್ದು, ಇಂಡಿಯನ್ ಪ್ರೀಮಿಯರ್ ಲೀಗ್‌ಗಿಂತ (ಐಪಿಎಲ್) ಮೊದಲು ಫಿಟ್ ಆಗಲಿದ್ದಾರೆ ಎಂದು ಬಿಸಿಸಿಐ ಮೂಲಗಳು ಮಾಹಿತಿ ನೀಡಿವೆ.
ಅಕ್ಟೋಬರ್-ನವೆಂಬರ್ನಲ್ಲಿ ಭಾರತದಲ್ಲಿ ನಡೆದ ವಿಶ್ವಕಪ್ನ ಮೊದಲ ನಾಲ್ಕು ಪಂದ್ಯಗಳಲ್ಲಿ ಹಾರ್ದಿಕ್ ಆಡಿದ್ದರು. 4 ಪಂದ್ಯಗಳಿಂದ 5 ವಿಕೆಟ್ ಪಡೆದಿದ್ದರು. ಅಕ್ಟೋಬರ್ 19ರಂದು ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಬೌಲಿಂಗ್ ವೇಳೆ ಪಾದದ ಗಾಯಕ್ಕೆ ತುತ್ತಾಗಿದ್ದರು.
ವಿಶ್ವಕಪ್ ನಂತರ ನಡೆದ ಆಸ್ಟ್ರೇಲಿಯಾ ವಿರುದ್ಧದ ಐದು ಟಿ20 ಪಂದ್ಯಗಳ ಸರಣಿ ಮತ್ತು ದಕ್ಷಿಣ ಆಫ್ರಿಕಾ ಪ್ರವಾಸದ ಟಿ20 ಮತ್ತು ಏಕದಿನ ಸರಣಿಯನ್ನೂ ಪಾಂಡ್ಯ ಕಳೆದುಕೊಂಡಿದ್ದಾರೆ. ಇವರ ಅನುಪಸ್ಥಿತಿಯಲ್ಲಿ ಎರಡು ಟಿ20 ಸರಣಿಗಳನ್ನು ಸೂರ್ಯಕುಮಾರ್ ಯಾದವ್ ಮುನ್ನಡೆಸಿದರೆ, ಏಕದಿನ ಪಂದ್ಯಗಳು ಕೆ.ಎಲ್.ರಾಹುಲ್ ನಾಯಕತ್ವದಲ್ಲಿ ನಡೆದಿವೆ.
ಅಫ್ಘಾನಿಸ್ತಾನ ವಿರುದ್ಧ ಜನವರಿ 11ರಿಂದ 17ರವರೆಗೆ ಮೂರು ಟಿ20 ಪಂದ್ಯಗಳ ಸರಣಿ ನಡೆಯಲಿದೆ. 2024ರ ಟಿ20 ವಿಶ್ವಕಪ್ಗೂ ಮುನ್ನ ಭಾರತ ಆಡುತ್ತಿರುವ ಕೊನೆಯ ಟಿ20 ಸರಣಿ ಇದು. ನಂತರ ಆಟಗಾರರು ಐಪಿಎಲ್ನಲ್ಲಿ ವಿವಿಧ ತಂಡಗಳಲ್ಲಿ ಆಡುವರು. ಅಫ್ಘಾನ್ ವಿರುದ್ಧದ ಪಂದ್ಯಕ್ಕೆ ಸೂರ್ಯಕುಮಾರ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯ ಲಭ್ಯವಿರುವುದಿಲ್ಲ.
ರೋಹಿತ್ಗೆ ನಾಯಕತ್ವ?: ಟಿ20 ವಿಶ್ವಕಪ್ನಲ್ಲಿ ಹಿರಿಯ ಆಟಗಾರರು ಆಡುತ್ತಾರಾ ಎಂಬ ಪ್ರಶ್ನೆ ಉದ್ಭವಿಸಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ಮುಗಿಸಿ ತವರಿಗೆ ಮರಳುವ ರೋಹಿತ್ ಶರ್ಮಾ ಟಿ20 ತಂಡದ ನಾಯಕತ್ವ ವಹಿಸಿಕೊಳ್ಳುತ್ತಾರಾ ಅಥವಾ ಕೆ.ಎಲ್.ರಾಹುಲ್, ಅನುಭವಿ ಬೌಲರ್ ಬುಮ್ರಾ ನಾಯಕತ್ವದಲ್ಲಿ ಪಂದ್ಯ ನಡೆಯುತ್ತಾ ಎಂಬುದನ್ನು ಕಾದುನೋಡಬೇಕು. ವಿಶ್ವಕಪ್ಗೂ ಮುನ್ನ ತಂಡದಲ್ಲಿ ಪ್ರಯೋಗ ಮಾಡಲು ಬಿಸಿಸಿಐಗೆ ಈ ಸರಣಿ ಕೊನೆಯ ಅವಕಾಶವಾಗಿದೆ.
ಗುಜರಾತ್ ತೊರೆದು ಮುಂಬೈಗೆ ಮರಳಿದ ಪಾಂಡ್ಯ: ನವೆಂಬರ್ನಲ್ಲಿ ಐಪಿಎಲ್ ಟ್ರೇಡ್ನಲ್ಲಿ ಹಾರ್ದಿಕ್ ಪಾಂಡ್ಯರನ್ನು ಗುಜರಾತ್ ಟೈಟಾನ್ಸ್‌ನಿಂದ (ಜಿಟಿ) ಅವರ ಹಿಂದಿನ ಫ್ರಾಂಚೈಸಿ ಮುಂಬೈ ಇಂಡಿಯನ್ಸ್ (ಎಂಐ) ಖರೀದಿಸಿತು. ಅಲ್ಲದೇ ಮುಂಬೈಗೆ ಮರಳಿದ ಹಾರ್ದಿಕ್ಗೆ ನಾಯಕತ್ವದ ಪಟ್ಟವನ್ನೂ ಕಟ್ಟಲಾಗಿದೆ. ಐಪಿಎಲ್ನಲ್ಲಿ ಹೊಸದಾಗಿ ಉದಯಿಸಿದ ಗುಜರಾತ್ ಟೈಟಾನ್ಸ್ಗೆ ಸೇರಿದ ಹಾರ್ದಿಕ್, ತಂಡವನ್ನು ಚೊಚ್ಚಲ ಆವೃತ್ತಿಯಲ್ಲೇ ಚಾಂಪಿಯನ್ಸ್ ಪಟ್ಟಕ್ಕೇರಿಸಿದ್ದರು. ಎರಡನೇ ಆವೃತ್ತಿಯಲ್ಲಿ ತಂಡ ರನ್ನರ್ ಅಪ್ ಆಗಿತ್ತು.
ಇದನ್ನೂ ಓದಿ:ಬಾಕ್ಸಿಂಗ್ ಡೇ ಟೆಸ್ಟ್: ರಾಹುಲ್ ಶತಕ ವೈಭವ, 245 ರನ್‌ಗಳಿಗೆ ಭಾರತ ಆಲೌಟ್