ದುಬೈ: ಪ್ರಸ್ತುತ ಯುಎಇಯಲ್ಲಿ ನಡೆಯುತ್ತಿರುವ ಐಪಿಎಲ್ನಲ್ಲಿ ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡದಿರುವುದು ಕೇವಲ ಮುಂಬೈ ಇಂಡಿಯನ್ಸ್ಗೆ ಮಾತ್ರವಲ್ಲ, ಟಿ-20 ವಿಶ್ವಕಪ್ನ ಭಾರತ ತಂಡಕ್ಕೂ ದೊಡ್ಡ ಹೊಡೆತ ಎಂದು ಲೆಜೆಂಡರಿ ಕ್ರಿಕೆಟಿಗ ಸುನೀಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.
ಭಾರತೀಯ ಆಯ್ಕೆಗಾರರು ಮುಂಬರುವ ಟಿ-20 ವಿಶ್ವಕಪ್ ತಂಡಕ್ಕೆ ಹಾರ್ದಿಕ್ ಪಾಂಡ್ಯ ಅವರನ್ನು ಆಯ್ಕೆ ಮಾಡಿದ್ದಾರೆ. ಆದರೆ, ಬರೋಡಾ ಆಲ್ರೌಂಡರ್ ಬೆನ್ನು ಶಸ್ತ್ರ ಚಿಕಿತ್ಸೆಯ ನಂತರ ಕಳೆದ 2 ಆವೃತ್ತಿಗಳಲ್ಲಿ ಮುಂಬೈ ಇಂಡಿಯನ್ಸ್ ಪರ ಬೌಲಿಂಗ್ ಮಾಡಿಲ್ಲ. ಇದರಿಂದ ಮುಂಬೈ ತಂಡಕ್ಕೆ ಭಾರಿ ಅನಾನುಕೂಲವಾಗಿದ್ದು, ಲೀಗ್ ಹಂತದಲ್ಲೇ ಹೊರಬೀಳುವ ಸ್ಥಿತಿಗೆ ಬಂದು ನಿಂತಿದೆ.
ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡದಿರುವುದು ದೊಡ್ಡ ಹೊಡೆತವಾಗಿದೆ. ಅದು ಕೇವಲ ಮುಂಬೈ ಇಂಡಿಯನ್ಸ್ಗೆ ಮಾತ್ರವಲ್ಲ, ಭಾರತ ತಂಡಕ್ಕೂ ಕೂಡ. ಏಕೆಂದರೆ ಅವರನ್ನು ಆಲ್ರೌಂಡರ್ ಎಂದು ತಂಡಕ್ಕೆ ಆಯ್ಕೆ ಮಾಡಲಾಗಿದೆ. ನೀವು ತಂಡದಲ್ಲಿದ್ದು, 6 ಅಥವಾ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ, ಬೌಲಿಂಗ್ ಮಾಡದಿದ್ದಾಗ ಅವರು ನಾಯಕನಿಗೆ ತುಂಬಾ ಕಷ್ಟವನ್ನುಂಟು ಮಾಡಲಿದೆ ಎಂದು ಗವಾಸ್ಕರ್ ಹೇಳಿದ್ದಾರೆ.
ಇನ್ನು ಐಪಿಎಲ್ನಲ್ಲಿ ಕಳೆದ ಸೀಸನ್ನಲ್ಲಿ ಅಬ್ಬರಿಸಿ ಈ ಋತುವಿನಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನ ತೋರುತ್ತಿರುವ ಸೂರ್ಯಕುಮಾರ್ ಯಾದವ್ ಮತ್ತು ಇಶಾನ್ ಕಿಶನ್ ಭಾರತ ತಂಡಕ್ಕೆ ಆಯ್ಕೆಯಾದ ಮೇಲೆ ತಣ್ಣಗಾಗಿದ್ದಾರೆ. ಮೊದಲಿನಂತೆ ಉತ್ಸಾಹ ಕಾಣುತ್ತಿಲ್ಲ ಎಂದಿದ್ದಾರೆ.
ಸೂರ್ಯಕುಮಾರ್ ಯಾದವ್ ಮತ್ತು ಇಶಾನ್ ಕಿಶನ್ ಭಾರತದ ಕ್ಯಾಪ್ ಪಡೆದ ಮೇಲೆ ಸ್ವಲ್ಪ ವಿಶ್ರಾಂತಿ ತೆಗೆದುಕೊಂಡಿದ್ದಾರೆ ಎಂದು ನಾನು ಭಾವಿಸುತ್ತೇನೆ. ಅವರ ಆಟ ಹಿಂದಿನಂತಿಲ್ಲ. ಭಾರತ ತಂಡದ ಆಟಗಾರರೆಂದು ತೋರಿಸಿಕೊಳ್ಳಲು ಕೆಲವು ಶಾಟ್ಗಳನ್ನು ಹೊಡೆಯಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಈ ಆಟಗಾರರು ಕ್ರೀಸ್ಗೆ ಆಗಮಿಸಿದಾಗ ಕೆಲವು ಸಮಯ ತೆಗೆದುಕೊಳ್ಳಬೇಕು. ನಂತರ ಸರಿಯಾದ ಶಾಟ್ ಸೆಲೆಕ್ಷನ್ ಕಡೆ ಗಮನ ನೀಡಬೇಕು ಎಂದು ಇಬ್ಬರು ಆಟಗಾರರ ವೈಫಲ್ಯಕ್ಕೆ ಕಾರಣ ತಿಳಿಸಿದ್ದಾರೆ.
ಸೂರ್ಯಕುಮಾರ್ ಯಾದವ್ 2021ರ ಐಪಿಎಲ್ನಲ್ಲಿ ಅತ್ಯಂತ ಕೆಟ್ಟ ಪ್ರದರ್ಶನ ತೋರುತ್ತಿದ್ದಾರೆ. ಆಡಿರುವ 12 ಪಂದ್ಯಗಳಲ್ಲಿ 18.50 ಸರಾಸರಿಯಲ್ಲಿ ಕೇವಲ 222 ರನ್ಗಳಿಸಿದ್ದಾರೆ. ಇಶಾನ್ ಕಿಶನ್ 8 ಪಂದ್ಯಗಳಿಂದ ಕೇವಲ 107ರನ್ಗಳಿಸಿದ್ದಾರೆ.
ಇದನ್ನು ಓದಿ:IPL ಪ್ರದರ್ಶನ ಆಧರಿಸಿ T-20 ವಿಶ್ವಕಪ್ ತಂಡದಲ್ಲಿ ಬದಲಾವಣೆ ಸೂಕ್ತವಲ್ಲ ಎಂದ ಅಗರ್ಕರ್!