ನವದೆಹಲಿ: ಕ್ರೀಡೆಯಲ್ಲಿ ಸೋಲು, ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು. ಆದರೆ ಕೆಲವೊಮ್ಮೆ ಒಂದು ಸೋಲು ದೊಡ್ಡ ಆಘಾತಕ್ಕೆ ಕಾರಣವಾಗುತ್ತದೆ. ಅಂಥ ಸಂದರ್ಭಗಳಲ್ಲಿ ಬೇಸರದಿಂದ ಹೊರಬರಲು ಗೆದ್ದವರ ಮೇಲೆ ಹರಿಹಾಯುವುದು ಸಾಮಾನ್ಯ. ಆದರೆ ಇದು ಹದ್ದು ಮೀರಬಾರದು. ಇನ್ನೊಬ್ಬರ ವೈಯಕ್ತಿಕ ಜೀವನವನ್ನು ಘಾಸಿಗೊಳಿಸಬಾರದು ಎಂದು ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಮನವಿ ಮಾಡಿದ್ದಾರೆ. ಆಸ್ಟ್ರೇಲಿಯಾ ತಂಡದ ಆಟಗಾರರು ಹಾಗು ಅವರ ಕುಟುಂಬದ ವಿರುದ್ಧ ಇತ್ತೀಚೆಗೆ ಆನ್‌ಲೈನ್‌ನಲ್ಲಿ ಟ್ರೋಲ್ ಮಾಡುತ್ತಿರುವುದಕ್ಕೆ ಸಿಂಗ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಎಕ್ಸ್ನಲ್ಲಿ ಬರೆದುಕೊಂಡಿರುವ ಹರ್ಭಜನ್ ಸಿಂಗ್, ವಿಶ್ವಕಪ್ ವಿಜೇತರು ಹಾಗು ಅವರ ಕುಟುಂಬ ಸದಸ್ಯರನ್ನು ಟ್ರೋಲ್ ಮಾಡುವುದು ಕೆಟ್ಟ ಅಭಿರುಚಿ. ಅವರು ಫೈನಲ್‌ನಲ್ಲಿ ಉತ್ತಮವಾಗಿ ಆಡಿ ಗೆದ್ದಿದ್ದಾರೆ ಎಂದು ತಿಳಿಸಿದ್ದಾರೆ.
ಅಭಿಮಾನಿಗಳಲ್ಲಿ ವಿನಂತಿ:"ಆಸ್ಟ್ರೇಲಿಯಾದ ಕ್ರಿಕೆಟಿಗರ ಕುಟುಂಬ ಸದಸ್ಯರನ್ನು ಟ್ರೋಲ್ ಮಾಡುವ ವರದಿಗಳು ಸಂಪೂರ್ಣವಾಗಿ ಕೆಟ್ಟ ಅಭಿರುಚಿಯಂತಿವೆ. ನಾವೂ ಚೆನ್ನಾಗಿಯೇ ಆಡಿದ್ದೇವೆ, ಆದರೆ ಆಸೀಸ್ ಉತ್ತಮ ಕ್ರಿಕೆಟ್ ಆಡಿ ಫೈನಲ್‌ನಲ್ಲಿ ಗೆದ್ದರು ಅಷ್ಟೇ. ಹೀಗಿದ್ದು, ಆಟಗಾರರು ಮತ್ತು ಅವರ ಕುಟುಂಬಗಳನ್ನು ಟ್ರೋಲ್ ಮಾಡುವುದೇಕೆ? ಇಂತಹ ನಡವಳಿಕೆಯನ್ನು ನಿಲ್ಲಿಸುವಂತೆ ಎಲ್ಲಾ ಕ್ರಿಕೆಟ್ ಅಭಿಮಾನಿಗಳಲ್ಲಿ ವಿನಂತಿಸುತ್ತೇನೆ. ವಿವೇಕ ಮತ್ತು ಘನತೆ ಎಲ್ಲಕ್ಕಿಂತಲೂ ಮುಖ್ಯ" ಎಂದು ತಿಳಿಸಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ಭಾರತ ಸೋತ ನಂತರ, ಅನೇಕ ಕ್ರಿಕೆಟ್ ಅಭಿಮಾನಿಗಳು ಆಸ್ಟ್ರೇಲಿಯಾದ ಕ್ರಿಕೆಟಿಗರ ಕುಟುಂಬ ಸದಸ್ಯರನ್ನು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಟ್ರೋಲ್ ಮಾಡಿದ್ದಾರೆ. ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಪತ್ನಿ ವಿನಿ ರಾಮನ್ ಈ ಬಗ್ಗೆ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬೇಸರ ವ್ಯಕ್ತಪಡಿಸಿದ್ದರು.