ನವದೆಹಲಿ:ಏಷ್ಯಾ ಕಪ್ನಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ ಆಲ್ರೌಂಡ್ ಆಟದ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿರುವ ಹಾರ್ದಿಕ್ ಪಾಂಡ್ಯ ಬಗ್ಗೆ ಮೆಚ್ಚುಗೆ ವ್ಯಕ್ತವಾಗ್ತಿದೆ. ಅವರ ಗುಣಗಾನ ಮಾಡಿರುವ ಮಾಜಿ ಆಟಗಾರ ಹರ್ಭಜನ್ ಸಿಂಗ್, ಮಹೇಂದ್ರ ಸಿಂಗ್ ಧೋನಿಗೆ ಹೋಲಿಕೆ ಮಾಡಿದ್ದಾರೆ.
ಬರೋಡಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಭವಿಷ್ಯದಲ್ಲಿ ಭಾರತದ ನಾಯಕನಾಗುವ ಎಲ್ಲ ಅರ್ಹತೆ ಇದೆ ಎಂದಿರುವ ಭಜ್ಜಿ, ಅವರ ಬ್ಯಾಟಿಂಗ್ನಲ್ಲಿ ವಿಭಿನ್ನ ಮಟ್ಟದ ಸಾಮರ್ಥ್ಯವಿದೆ. ಮೈದಾನದಲ್ಲಿ ಶಾಂತ ಸ್ವಭಾವದಿಂದ ಇರುವ ಹಾರ್ದಿಕ್, ಇತ್ತೀಚಿನ ದಿನಗಳಲ್ಲಿ ತಮ್ಮ ಪ್ರತಿಭೆ ಸಾಬೀತುಪಡಿಸಿದ್ದಾರೆ ಎಂದರು.
ಪಾಂಡ್ಯ ತಂಡದ ನಾಯಕನಾಗಬೇಕು. ನಾಯಕನಾಗುತ್ತಾರೆ ಎಂದು ನಾನು ಭಾವಿಸುತ್ತೇನೆ. ಇತ್ತೀಚಿನ ದಿನಗಳಲ್ಲಿ ವಿಭಿನ್ನ ಅವತಾರಗಳಲ್ಲಿ ಕಾಣುತ್ತಿರುವ ಹಾರ್ದಿಕ್ ಅವರಲ್ಲಿ ಎಂ ಎಸ್ ಧೋನಿ ಗುಣಲಕ್ಷಣ ಕಾಣಿಸುತ್ತಿವೆ. ಅವರ ಸಾಮರ್ಥ್ಯದ ಮೇಲೆ ಹಾರ್ದಿಕ್ಗೆ ನಂಬಿಕೆ ಇದೆ.
ಕಳೆದ ವರ್ಷ ಟಿ20 ವಿಶ್ವಕಪ್ ಬಳಿಕ ದೀರ್ಘ ವಿಶ್ರಾಂತಿ ತೆಗೆದುಕೊಂಡಿದ್ದ ಹಾರ್ದಿಕ್, ಟೀಂ ಇಂಡಿಯಾಗೆ ಕಮ್ಬ್ಯಾಕ್ ಮಾಡ್ತಾರೆಂದು ಯಾರೂ ಅಂದುಕೊಂಡಿರಲಿಲ್ಲ. ಹೀಗಾಗಿ, 5 ತಿಂಗಳ ಕಾಲ ಸೈಡ್ಲೈನ್ ಆಗಿದ್ದರು. ಇದಾದ ಬಳಿಕ 2022ರ ಐಪಿಎಲ್ ಬಳಿಕ ಕಮ್ಬ್ಯಾಕ್ ಮಾಡಿ, ಐರ್ಲೆಂಡ್ ವಿರುದ್ಧ ತಂಡದ ನಾಯಕತ್ವ ಜವಾಬ್ದಾರಿ ಸಹ ವಹಿಸಿಕೊಂಡಿದ್ದರು. ಹಾರ್ದಿಕ್ ಕಠಿಣ ಪರಿಶ್ರಮ, ಬದ್ಧತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಹರ್ಭಜನ್ ಸಿಂಗ್, ಅವರು ಟೀಂ ಇಂಡಿಯಾ ನಾಯಕನಾಗುವುದನ್ನು ನಾನು ಎದುರು ನೋಡುತ್ತಿದ್ದೇನೆ ಎಂದು ಹೇಳಿದರು.