ಹೈದರಾಬಾದ್ :ಭಾರತ ಮತ್ತು ಪಾಕಿಸ್ತಾನ ನಡುವಿನ ಟಿ-20 ವಿಶ್ವಕಪ್‌ನ ಪಂದ್ಯ ಕೊನೆಗೊಂಡಿದ್ದರೂ ಉಭಯ ದೇಶಗಳ ಮಾಜಿ ಆಟಗಾರರ ನಡುವಿನ ಮಾತಿನ ಸಮರ ತಾರಕಕ್ಕೇರಿದೆ. ಟೀಂ ಇಂಡಿಯಾ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಮತ್ತು ಪಾಕ್ ಮಾಜಿ ವೇಗಿ ಮೊಹಮ್ಮದ್ ಅಮೀರ್ ಟ್ವಿಟರ್‌ನಲ್ಲಿ ಪರಸ್ಪರರು ವಾಗ್ದಾಳಿ ನಡೆಸಿದ್ದಾರೆ.
ಕಳೆದ ಭಾನುವಾರ ದುಬೈನಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಪಾಕಿಸ್ತಾನವು ಟೀಂ ಇಂಡಿಯಾವನ್ನು ಹತ್ತು ವಿಕೆಟ್‌ಗಳಿಂದ ಸೋಲಿಸಿತ್ತು. ಇದರೊಂದಿಗೆ ನೆರೆಯ ಶತ್ರು ದೇಶ ವಿಶ್ವಕಪ್‌ನಲ್ಲಿ ಭಾರತ ವಿರುದ್ಧ ಮೊದಲ ಜಯ ಸಾಧಿಸಿ, ಈ ವಿಶ್ವಕಪ್‌ನಲ್ಲಿ ಹಿಂದಿನ ದಾಖಲೆಯನ್ನು ಮುರಿದಿದೆ.
ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಮೀರ್ ಹಳೆಯ ವಿಡಿಯೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ಹರ್ಭಜನ್ ಸಿಂಗ್ ಬೌಲಿಂಗ್‌ನಲ್ಲಿ ಶಾಹಿದ್ ಅಫ್ರಿದಿ ಸತತ 4 ಎಸೆತಗಳಿಗೆ 4 ಸಿಕ್ಸರ್ ಸಿಡಿಸಿದ್ದಾರೆ.
ಇದಕ್ಕೆ ತಿರುಗೇಟು ಎಂಬಂತೆ ಭಜ್ಜಿ ಫೋಟೋವೊಂದನ್ನು ಟ್ವೀಟ್ ಮಾಡಿದ್ದಾರೆ. 2010ರಲ್ಲಿ ಲಾರ್ಡ್ಸ್‌ನಲ್ಲಿ ನಡೆದ ಇಂಗ್ಲೆಂಡ್-ಪಾಕಿಸ್ತಾನ ಪಂದ್ಯದಲ್ಲಿ ಅಮೀರ್ ಅವರ 'ನೋ ಬಾಲ್' ಕ್ಲಿಪ್ಪ್ ಅನ್ನು ಪೋಸ್ಟ್ ಮಾಡಿದ್ದಾರೆ.
ಹಣಕ್ಕಾಗಿ ಆಟ ಆಡುವವನಂತೆ ಜನರು ನಿಮ್ಮನ್ನು ನೋಡುತ್ತಾರೆ. ಗೌರವ, ಅಭಿಮಾನ ಏನೂ ಇಲ್ಲ. ಹಣ ಮಾತ್ರ ಇದೆ. ನಿಮ್ಮ ದೇಶದಲ್ಲಿ ಎಷ್ಟು ಬೆಂಬಲಿಗರನ್ನು ಸಂಪಾದಿಸಿದ್ದಾರೆಂದು ಹೇಳಲು ಸಾಧ್ಯವಿಲ್ಲ. ಈ ರೀತಿ ನೀವು ಕ್ರಿಕೆಟ್‌ಗೆ ಅವಮಾನ ಮಾಡಿದ್ದೀರಿ.
ಜನರನ್ನು ಮರುಳು ಮಾಡುವ ನಿಮ್ಮಂತಹ ಜನರೊಂದಿಗೆ ಮಾತನಾಡುತ್ತಿರುವುದಕ್ಕೆ ಬೇಸರ ಆಗುತ್ತೆ ಎಂದು ಟ್ವೀಟ್ ಮಾಡಿದ್ದಾರೆ. ಇದರೊಂದಿಗೆ ಮೊಹಮ್ಮದ್ ಅಮೀರ್ ಬೌಲಿಂಗ್‌ನಲ್ಲಿ ಹರ್ಭಜನ್ ಸಿಂಗ್ ಸಿಕ್ಸ್ ಬಾರಿಸುವ ಮೂಲಕ ಟೀಂ ಇಂಡಿಯಾಗೆ ಗೆಲುವು ತಂದುಕೊಟ್ಟ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. 'ಫಿಕ್ಸರ್ ಕಿ ಸಿಕ್ಸರ್... ಔಟ್ ಆಫ್ ದಿ ಪಾರ್ಕ್' ಎಂಬ ಶೀರ್ಷಿಕೆ ನೀಡಿದ್ದಾರೆ.
ಇಂಗ್ಲೆಂಡ್ ಸರಣಿಯಲ್ಲಿ ಅಂದಿನ ಪಾಕ್ ಆಟಗಾರರಾದ ಮೊಹಮ್ಮದ್ ಅಮೀರ್ ಜೊತೆಗೆ ಆಸೀಫ್, ಸಲ್ಮಾನ್ ಭಟ್ ಸ್ಪಾಟ್ ಫಿಕ್ಸಿಂಗ್ ಮಾಡಿದ್ದು ದೃಢವಾಗಿತ್ತು. ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) 2016ರಲ್ಲಿ ಅಮೀರ್‌ಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಲು ಅವಕಾಶ ನೀಡಿತು. ಆದರೆ, ಅಮೀರ್ ಕಳೆದ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು.