ಹೈದರಾಬಾದ್: ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಟೀಂ ಇಂಡಿಯಾ ಪರ ತಮ್ಮದೇ ಛಾಪು ಮೂಡಿಸಿರುವ ಕ್ರಿಕೆಟರ್ ಟರ್ಬನೇಟರ್ ಹರ್ಭಜನ್ ಸಿಂಗ್ ಕ್ರಿಕೆಟ್ ವೃತ್ತಿ ಬದುಕಿಗೆ ವಿದಾಯ ಘೋಷಣೆ ಮಾಡಿದ್ದಾರೆ. ಈ ಮೂಲಕ ಬರೋಬ್ಬರಿ 23 ವರ್ಷಗಳ ಕ್ರಿಕೆಟ್ ಆಟಕ್ಕೆ ಕೊನೆಗೂ ತೆರೆ ಎಳೆದಿದ್ದಾರೆ.
ಮೂರು ಮಾದರಿ ಕ್ರಿಕೆಟ್ನಲ್ಲಿ ಟೀಂ ಇಂಡಿಯಾ ಪರ ಉತ್ತಮ ಸ್ಪಿನ್ನರ್ ಎಂಬ ಹೆಸರುಗಳಿಸಿದ್ದ ಹರ್ಭಜನ್ ಸಿಂಗ್ 2001ರಲ್ಲಿ ಬಾರ್ಡರ್ - ಗವಾಸ್ಕರ್ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳಿಂದ ದಾಖಲೆಯ 32 ವಿಕೆಟ್ ಪಡೆದುಕೊಂಡು ಹೊಸ ದಾಖಲೆ ನಿರ್ಮಾಣ ಮಾಡಿದ್ದರು.
ಟ್ವೀಟ್ ಮೂಲಕ ನಿವೃತ್ತಿ ಪ್ರಕಟಿಸಿದ ಹರ್ಭಜನ್ ಸಿಂಗ್
ತಾವು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಹೇಳಿರುವ ವಿಚಾರವನ್ನ ಟ್ವಿಟರ್ ಮೂಲಕ ಹೊರಹಾಕಿರುವ ಹರ್ಭಜನ್ ಸಿಂಗ್, ಎಲ್ಲ ಒಳ್ಳೆಯ ದಿನಗಳು ಒಂದು ದಿನ ಕೊನೆಗೊಳ್ಳಲೇಬೇಕು. ನನ್ನ ಜೀವನದಲ್ಲಿ ಎಲ್ಲವನ್ನೂ ನೀಡಿದ ಆಟಕ್ಕೆ ವಿದಾಯ ಘೋಷಣೆ ಮಾಡುತ್ತಿದ್ದೇನೆ. ಈ 23 ವರ್ಷಗಳ ಸುದೀರ್ಘ ಪ್ರಯಾಣವನ್ನು ಸುಂದರ ಮತ್ತು ಸ್ಮರಣೀಯವಾಗಿಸಿದ ಪ್ರತಿಯೊಬ್ಬರಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ನನ್ನ ಹೃತ್ಪೂರ್ವಕ ಧನ್ಯವಾದಗಳು ಎಂದಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ್ದ ಭಜ್ಜಿ
2007ರ ಟಿ-20 ವಿಶ್ವಕಪ್ ಹಾಗೂ 2011ರ ಏಕದಿನ ವಿಶ್ವಕಪ್ನ ಭಾಗವಾಗಿದ್ದ ಹರ್ಭಜನ್ ಸಿಂಗ್, 2007ರ ಚುಟುಕು ಕ್ರಿಕೆಟ್ನಲ್ಲಿ 7 ವಿಕೆಟ್ ಹಾಗೂ 2011ರ ವಿಶ್ವಕಪ್ನಲ್ಲಿ ಪಾಕಿಸ್ತಾನ ಹಾಗೂ ಶ್ರೀಲಂಕಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಅತ್ಯುತ್ತಮ ಸಾಧನೆ ಮಾಡಿ ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.
2016ರಲ್ಲಿ ಟೀಂ ಇಂಡಿಯಾ ಪರ ಕೊನೆಯ ಪಂದ್ಯವನ್ನಾಡಿರುವ ಹರ್ಭಜನ್ ಸಿಂಗ್ 103 ಟೆಸ್ಟ್ ಪಂದ್ಯಗಳಿಂದ 417 ವಿಕೆಟ್ ಪಡೆದುಕೊಂಡಿದ್ದು, ಏಕದಿನದಲ್ಲಿ 269 ಹಾಗೂ ಟಿ-20ಯಲ್ಲಿ 25 ವಿಕೆಟ್ ಪಡೆದುಕೊಂಡಿದ್ದಾರೆ. ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದವರ ಸಾಲಿನಲ್ಲಿ 4ನೇ ಸ್ಥಾನದಲ್ಲಿದ್ದಾರೆ.
ಕ್ರಿಕೆಟ್ಗೆ ವಿದಾಯ ಘೋಷಿಸಿದ ಸ್ಪಿನ್ನ ಮಾಂತ್ರಿಕ ಹರ್ಭಜನ್ ಸಿಂಗ್
ಐಪಿಎಲ್ನಲ್ಲೂ ಉತ್ತಮ ಪ್ರದರ್ಶನ ನೀಡಿರುವ ಭಜ್ಜಿ, ಕೋಲ್ಕತ್ತಾ ನೈಟ್ ರೈಡರ್ಸ್, ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ಪರ ಕಣಕ್ಕಿಳಿದು, ಅನೇಕ ಪಂದ್ಯಗಳಲ್ಲಿ ಗೆಲುವಿನ ಕಾಣಿಕೆ ನೀಡಿದ್ದಾರೆ. ವಿಶೇಷವೆಂದರೆ ಐಪಿಎಲ್ನಲ್ಲಿ 163 ಪಂದ್ಯಗಳನ್ನಾಡಿದ್ದು, ಒಟ್ಟು 150 ವಿಕೆಟ್ ಪಡೆದುಕೊಂಡಿದ್ದಾರೆ.
ಲಭ್ಯವಾಗಿರುವ ಮಾಹಿತಿ ಪ್ರಕಾರ ಮುಂದಿನ ವರ್ಷದಿಂದ ಹರ್ಭಜನ್ ಸಿಂಗ್ ಐಪಿಎಲ್ ತಂಡವೊಂದರ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸಲು ಸಜ್ಜಾಗಿದ್ದಾರೆಂಬ ಮಾಹಿತಿ ಕೂಡ ಲಭ್ಯವಾಗಿದೆ.