ಮುಂಬೈ: ಭಾರತ ಹಾಗೂ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಶನಿವಾರ 35ನೇ ವಸಂತಕ್ಕೆ ಕಾಲಿಟ್ಟಿದ್ದು, ಹಾಲಿ-ಮಾಜಿ ಕ್ರಿಕೆಟಿಗರು ಸೇರಿದಂತೆ ಸಾವಿರಾರು ಅಭಿಮಾನಿಗಳು ಹಿಟ್ಮ್ಯಾನ್ಗೆ ಸಾಮಾಜಿಕ ಜಾಲತಾಣದಲ್ಲಿ ಶುಭಕೋರಿದ್ದಾರೆ.
2021ರ ಟಿ20 ವಿಶ್ವಕಪ್ ನಂತರ ಭಾರತ ತಂಡದ ನಾಯಕನಾಗಿ ನೇಮಕವಾಗಿರುವ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಸತತ ಗೆಲುವು ಪಡೆದು ಮಿಂಚಿದ್ದಾರೆ. ದಶಕದಿಂದ ಎದುರು ನೋಡುತ್ತಿರುವ ಐಸಿಸಿ ಟ್ರೋಫಿ ತಂದುಕೊಡಲು ಶ್ರಮಿಸುತ್ತಿದ್ದಾರೆ.
35ನೇ ವಸಂತಕ್ಕೆ ಕಾಲಿಟ್ಟಿ ಹಿಟ್ಮ್ಯಾನ್ಗೆ ಯುವರಾಜ್ ಸಿಂಗ್, ವಸೀಂ ಜಾಫರ್, ಮಯಾಂಕ್ ಅಗರ್ವಾಲ್, ಕೆ ಎಲ್ ರಾಹುಲ್, ಸುರೇಶ್ ರೈನಾ, ಇರ್ಫಾನ್ ಪಠಾಣ್, ವಾಷಿಂಗ್ಟನ್ ಸುಂದರ್, ರಾಬಿನ್ ಉತ್ತಪ್ಪ, ರಮಣ್ದೀಪ್ ಸಿಂಗ್, ಹೃತಿಕ್ ಶೊಕೀನ್, ಕುಲ್ದೀಪ್ ಯಾದವ್, ರಾಹುಲ್ ಶರ್ಮಾ, ತಿಲಕ್ ವರ್ಮಾ, ಯುಜ್ವೇಂದ್ರ ಚಹಲ್ ಸೇರಿದಂತೆ ದೇಶದ ಹಾಲಿ-ಮಾಜಿ ಕ್ರಿಕೆಟಿಗರು, ಬಿಸಿಸಿಐ ಹಾಗೂ ಎಲ್ಲಾ ಐಪಿಎಲ್ ಫ್ರಾಂಚೈಸಿಗಳು ಶುಭಾ ಹಾರೈಸಿವೆ.
ಇಲ್ಲಿಯವರೆಗೆ ರೋಹಿತ್ ಶರ್ಮಾ 230 ಏಕದಿನ ಪಂದ್ಯಗಳನ್ನಾಡಿದ್ದು 29 ಶತಕಗಳು ಹಾಗೂ 44 ಅರ್ಧಶತಕಗಳು ಸೇರಿದಂತೆ ಒಟ್ಟು 9283 ರನ್, 45 ಟೆಸ್ಟ್ ಪಂದ್ಯಗಳಿಂದ 8 ಶತಕಗಳ ಸಹಿತ 3137 ರನ್ ಮತ್ತು 125 ಟಿ20 ಪಂದ್ಯಗಳಿಂದ 3313 ರನ್ಗಳಿಸಿದ್ದಾರೆ.
ರೋಹಿತ್ ಶರ್ಮಾಹುಟ್ಟುಹಬ್ಬದ ಸಂದರ್ಭದಲ್ಲಿ ಅವರ ಕೆಲವು ವಿಶ್ವದಾಖಲೆಗಳನ್ನು ಸ್ಮರಿಸೋಣ
- ರೋಹಿತ್ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ 3 ದ್ವಿಶತಕ ಸಿಡಿಸಿರುವ ವಿಶ್ವದ ಏಕೈಕ ಬ್ಯಾಟರ್ ಆಗಿದ್ದಾರೆ. ಬೇರೆ ಯಾವ ಬ್ಯಾಟರ್ ಒಂದಕ್ಕಿಂತ ಹೆಚ್ಚು ಬಾರಿ ಈ ಸಾಧನೆ ಮಾಡಿಲ್ಲ.
- ಏಕದಿನ ಪಂದ್ಯದಲ್ಲಿ 264 ರನ್ ಸಿಡಿಸುವ ಮೂಲಕ ರೋಹಿತ್ ಅತಿ ಹೆಚ್ಚು ವೈಯಕ್ತಿಕ ಸ್ಕೋರ್ ವಿಶ್ವದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಬೇರೆ ಯಾವ ಬ್ಯಾಟರ್ 250ರ ಗಡಿ ದಾಟಿಲ್ಲ.
- 4 ಶತಕ: ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಬ್ಯಾಟರ್. ಮ್ಯಾಕ್ಸ್ವೆಲ್ ಮತ್ತು ಕಾಲಿನ್ ಮನ್ರೋ ತಲಾ 3 ಶತಕ ಸಿಡಿಸಿದ್ದಾರೆ.
- 3313 ರನ್ಗಳಿಸುವ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಹೆಚ್ಚು ರನ್ ಸಿಡಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ.
- 6 ಶತಕ: ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಒಂದೇ ಆವೃತ್ತಿಯಲ್ಲಿ ಹೆಚ್ಚು ಶತಕ ಸಿಡಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ.
- 5 ಬಾರಿ ಐಪಿಎಲ್ ಟ್ರೋಫಿ ಗೆಲ್ಲುವ ಮೂಲಕ ವಿಶ್ವದಲ್ಲಿ ಅತಿಹೆಚ್ಚು ಬಾರಿ ಟಿ20 ಲೀಗ್ಗಳನ್ನು ಗೆದ್ದಿರುವ ನಾಯಕ ಎನಿಸಿಕೊಂಡಿದ್ದಾರೆ.
ಇದನ್ನೂ ಓದಿ:ಮುಂಬೈ ವಿರುದ್ಧದ ಪಂದ್ಯದಲ್ಲಿ ವಿಶೇಷ ಜರ್ಸಿ ತೊಟ್ಟು ರಾಜಸ್ಥಾನ ಕಣಕ್ಕೆ: ಕಾರಣ?