ಹೈದರಾಬಾದ್:ಭಾರತ ಕ್ರಿಕೆಟ್ನಲ್ಲಿ ರಾರಾಜಿಸುತ್ತಿರುವ ಮೊಹಮ್ಮದ್ ಸಿರಾಜ್ ಹೆಸರನ್ನು ಕೇಳಿದರೆ ಆತನ ಹಿನ್ನೆಲೆ ನಮ್ಮ ಕಣ್ಣಮುಂದೆ ಬರುತ್ತದೆ. ಆಟೋ ಓಡಿಸುತ್ತಿದ್ದ ಆತನ ತಂದೆಯ ನೆನಪಾಗುತ್ತದೆ. ಗಲ್ಲಿ ಕ್ರಿಕೆಟ್ನಿಂದ ಟೀಮ್ ಇಂಡಿಯಾದ ಪ್ರಧಾನ ಬೌಲರ್ಗಳಲ್ಲಿ ಒಬ್ಬರಾಗಿ ಹಂತ ಹಂತವಾಗಿ ಬೆಳೆದ ವೇಗದ ಬೌಲರ್ ನೆನಪಾಗುತ್ತದೆ.
ಇದೀಗ ಆ ಸಿರಾಜ್ ರೀತಿಯಲ್ಲೇ ಮತ್ತೆ ಮುತ್ತಿನ ನಗರಿಯ ಯುವಕ ಸಾಗುತ್ತಿದ್ದಾನೆ. ಆತನ ಹೆಸರು ಭುವನಗಿರಿ ಪುನ್ನಯ್ಯ. ಹೈದರಾಬಾದ್ನ ಕಡುಬಡತನದ ಕುಟುಂಬದಿಂದ ಬಂದಂತಹ ಈ ಯುವಕ ರಣಜಿಯಲ್ಲಿ ಪಾದಾರ್ಪಣೆ ಮಾಡಿದ್ದಾರೆ. ಬಡ ಕುಟುಂಬದಿಂದ ಬಂದು ರಣಜಿ ಬಾಗಿಲು ತಟ್ಟಿ ಭಾರತ ತಂಡದಲ್ಲಿ ಆಡುವ ಕನಸಿನ ಕಡೆಗೆ ಮುನ್ನುಗ್ಗುತ್ತಿದ್ದಾರೆ.
ಕುಟುಂಬದ ಹಿನ್ನೆಲೆ..ಕುಕ್ಕಟಪಲ್ಲಿ ಹೌಸಿಂಗ್ ಬೋರ್ಡ್ಗೆ ಸೇರಿರುವ ಪುನ್ನಯ್ಯ ಅವರದು ಚಿಕ್ಕದಾದ ಚೊಕ್ಕ ಕುಟುಂಬ. ತಂದೆ ಅಂಜನೇಯುಲು ಆಟೋ ರಿಕ್ಷಾ ಓಡಿಸುತ್ತಿದ್ದರೆ, ತಾಯಿ ಮನೆಗೆಲಸ ಮಾಡುತ್ತಾರೆ. ಚಿಕ್ಕ ಗುಡಿಸಿಲಿನಲ್ಲಿಯೇ ಇವರ ಜೀವನ. ಇಂತಹ ಸ್ಥಿತಿಯಿಂದ ಬಂದ 18 ವರ್ಷದ ಪುನ್ನಯ್ಯ ರಣಜಿ ಮಟ್ಟಕ್ಕೆ ಬೆಳೆಯುವುದೇ ದೊಡ್ಡ ವಿಶೇಷ. ಐದನೇ ತರಗತಿಯಲ್ಲಿದ್ದಾಗ ಭುವನ ವಿಜಯಂ ಮೈದಾನದಲ್ಲಿ ಸಾಮಾನ್ಯವಾಗಿ ಟೆನ್ನಿಸ್ ಚೆಂಡಿನಲ್ಲಿ ಆಡುವುದನ್ನು ಆರಂಭಿಸಿದ ಪುನ್ನಯ್ಯ, ಪೇಸ್ ಬೌಲಿಂಗ್‌ನಲ್ಲಿ ಎಲ್ಲರ ಗಮನ ಸೆಳೆದರು. ಕೋಚ್ ನರೇಶ್ ಉತ್ತೇಜನದೊಂದಿಗೆ ವೇಗದೊಂದಿಗೆ ಸ್ವಿಂಗ್ಅನ್ನು ಅವರು ಕಲಿತಿದ್ದಾರೆ. ಆತನಲ್ಲಿ ಕೌಶಲವನ್ನು ಗುರುತಿಸಿದ ಮಾಜಿ ಆಟಗಾರ ಚಾಮುಂಡೇಶ್ವರೀನಾಥ್ ಆರ್ಥಿಕವಾಗಿ ಯುವ ಆಟಗಾರನಿಗೆ ನೆರವು ನೀಡಿ ಉತ್ತೇಜನ ನೀಡಿದ್ದಾರೆ.
ಕೆರಿಯರ್ ಟರ್ನಿಂಗ್ ಪಾಯಿಂಟ್..ಹೈಟೆಕ್ ಸಿಟಿಯ ರಾಮಾನಾಯ್ಡು ಕ್ರಿಕೆಟ್ ಅಕಾಡೆಮಿಯಲ್ಲಿ ಅಭ್ಯಾಸ ಮಾಡುವ ಅವಕಾಶ ಸಿಕ್ಕಿದ್ದು ಆತನ ವೃತ್ತಿಜೀವನದ ಮಹತ್ತರ ತಿರುವು. ಇಲ್ಲೇ ಅವರು ಹೊಸ ಚೆಂಡಿನೊಂದಿಗೆ ಆಡುವುದನ್ನು ಪ್ರಾಕ್ಟೀಸ್ ಮಾಡಿ ನಿಧಾನವಾಗಿ ಹಿಡಿತ ಸಾಧಿಸಿದರು. ನಂತರ ಹೆಚ್‌ಸಿಎ ಶಿಬಿರದಲ್ಲಿ ಕಾಲಿಟ್ಟ ಅವರು, ಲೀಗ್ಸ್‌ನಲ್ಲಿಯೇ ಎಂಪಿ ಕೋಲ್ಟ್ಸ್ ತಂಡದ ವಿರುದ್ಧ ಆರ್ಭಟಿಸಿದರು.