ಅಹಮದಾಬಾದ್: ರಣಜಿ ಟ್ರೋಫಿಯ ಎಲೈಟ್ ಗ್ರೂಪ್-ಸಿ ಪಂದ್ಯದಲ್ಲಿ ಕರ್ನಾಟಕ ವಿರುದ್ದ ಗುಜರಾತ್ ತಂಡ ರೋಚಕ ಗೆಲುವು ಸಾಧಿಸಿದೆ. ಇಲ್ಲಿಯ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ ಗುಜರಾತ್ ತಂಡ 6 ರನ್‌ಗಳ ಗೆಲುವು ಸಾಧಿಸಿ ಅಚ್ಚರಿ ಮೂಡಿಸಿದೆ.
ಎರಡನೇ ಇನ್ನಿಂಗ್ಸ್ನಲ್ಲಿ ಗೆಲುವಿಗೆ 109 ರನ್‌ಗಳ ಗುರಿ ಪಡೆದಿದ್ದ ಕರ್ನಾಟಕ ತಂಡ ಆರಂಭಿಕ ವಿಕೆಟ್ ನಷ್ಟವಿಲ್ಲದೇ 50 ರನ್ ಗಳಿಸಿ ಗೆಲುವಿನ ದಡಕ್ಕೆ ಸಮೀಪಿಸಿತ್ತು. ಈ ವೇಳೆ ಗುಜರಾತ್ ಸ್ಪಿನ್ನರ್ ಸಿದ್ಧಾರ್ಥ್ ದೇಸಾಯಿ ಅವರ ಮಾರಕ ಬೌಲಿಂಗ್ ದಾಳಿಗೆ ಸಿಲುಕಿ ಮುಂದಿನ 53 ರನ್ ಗಳಲ್ಲಿ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಳ್ಳುವ ಮೂಲಕ 103 ರನ್‌ಗಳಿಗೆ ಸರ್ವಪತನ ಕಂಡು ಸೋಲು ಕಂಡಿದೆ.
ಈ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕದ ನಾಯಕ ಮಯಾಂಕ್ ಅಗರ್ವಾಲ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದರು. ಕ್ಷಿತಿಜ್ ಪಟೇಲ್ (95) ಮತ್ತು ಉಮಂಗ್ ಕುಮಾರ್ (72) ಅವರ ಅರ್ಧಶತಕದ ನೆರವಿನಿಂದ ಮೊದಲ ಇನ್ನಿಂಗ್ಸ್ನಲ್ಲಿ ಗುಜರಾತ್ ತಂಡ 264 ರನ್ಗಳಿಸಿತು. ಇದಕ್ಕುತ್ತರವಾಗಿ ಕರ್ನಾಟಕ ತಂಡ ಮಯಾಂಕ್ ಅಗರ್ವಾಲ್ (109) ಶತಕ ಮತ್ತು ಮನೀಶ್ ಪಾಂಡೆ (88) ಸಮರ್ಥ್ ಆರ್ (60) ಅವರ ಅರ್ಧಶತಕದ ನೆರವಿನಿಂದ 374 ರನ್ಗಳಿಸಿ ಮೊದಲ ಇನಿಂಗ್ಸ್‌ನಲ್ಲಿ 110 ರನ್‌ಗಳ ಮುನ್ನಡೆ ಸಾಧಿಸಿತ್ತು.