ಅಹಮದಾಬಾದ್ :ಭಾರತ ವಿರುದ್ಧದ ವೈಟ್ ಬಾಲ್ ಸರಣಿಗೆ ಮುನ್ನ ಕಿರಾನ್ ಪೊಲಾರ್ಡ್ ನೇತೃತ್ವದ ವೆಸ್ಟ್ ಇಂಡೀಸ್ ತಂಡ ಅಹಮದಾಬಾದ್‌ಗೆ ಆಗಮಿಸಿದೆ. ಭಾರತದ ವಿರುದ್ಧ ವೆಸ್ಟ್ ಇಂಡೀಸ್ ಮೂರು ಏಕದಿನ ಹಾಗೂ ಮೂರು ಟಿ-20 ಪಂದ್ಯಗಳನ್ನಾಡಲಿದೆ.
ಏಕದಿನ ಸರಣಿ ಫೆಬ್ರವರಿ 6ರಿಂದ 11ರವರೆಗೆ ನಡೆಯಲಿದೆ. ಫೆಬ್ರವರಿ 6ರಂದು ಮೊದಲ ಪಂದ್ಯ ನಡೆಯಲಿದೆ. ಇದು ಭಾರತ ತಂಡಕ್ಕೆ ಐತಿಹಾಸಿಕ ಪಂದ್ಯವಾಗಿದೆ. ಈ ಪಂದ್ಯ ಭಾರತ ತಂಡಕ್ಕೆ 1000ನೇ ಏಕದಿನ ಪಂದ್ಯವಾಗಿದೆ.
ಈ ಐತಿಹಾಸಿಕ ಪಂದ್ಯಕ್ಕೆ ಭಾರತ ಕ್ರಿಕೆಟ್ ಮಂಡಳಿ ಸಕಲ ಸಿದ್ದತೆ ಮಾಡಿಕೊಂಡಿದೆ. ಮೂರು ಏಕದಿನ ಪಂದ್ಯಗಳು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿವೆ.
"ಬಾರ್ಬಡೋಸ್‌ನಿಂದ ಸುದೀರ್ಘ ಎರಡು ದಿನಗಳ ಪ್ರಯಾಣದ ನಂತರ, #MenInMaroon ಭಾರತಕ್ಕೆ ಆಗಮಿಸಿದ್ದಾರೆ" ಎಂದು ವಿಂಡೀಸ್ ಕ್ರಿಕೆಟ್ ಅಧಿಕೃತ ಹ್ಯಾಂಡಲ್ನಲ್ಲಿ ಟ್ವೀಟ್ ಮಾಡಿಕೊಂಡಿದೆ.
ಇನ್ನು ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ 3 ಪಂದ್ಯಗಳ ಏಕದಿನ ಸರಣಿ ಕೋವಿಡ್-19 ಸಾಂಕ್ರಾಮಿಕ ಕಾರಣದಿಂದ ಮುಚ್ಚಿದ ಸ್ಟೇಡಿಯಂನಲ್ಲಿ ನಡೆಯಲಿದೆ ಎಂದು ಗುಜರಾತ್ ಕ್ರಿಕೆಟ್ ಅಸೋಸಿಯೇಷನ್ ಮಂಗಳವಾರ ಖಚಿತಪಡಿಸಿದೆ.
"ನಾವು 2022ರ ಏಕದಿನ ಸರಣಿಗೆ ಭಾರತಕ್ಕೆ ಪ್ರವಾಸ ಕೈಗೊಡಿರುವ ವೆಸ್ಟ್ ಇಂಡೀಸ್ ತಂಡಕ್ಕೆ ಅತಿಥ್ಯವಹಿಸಲು ಸಿದ್ಧರಾಗಿದ್ಧೇವೆ. ಫೆಬ್ರವರಿ 6ರಂದು ನಡೆಯಲಿರುವ ಮೊದಲ ಏಕದಿನ ಪಂದ್ಯ ಭಾರತಕ್ಕೆ ತುಂಬಾ ವಿಶೇಷ ಮತ್ತು ಐತಿಹಾಸಿಕ ಪಂದ್ಯವಾಗಲಿದೆ. ಅದು ದೇಶದ 1000ನೇ ಏಕದಿನ ಪಂದ್ಯವಾಗಲಿದೆ.
ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಈ ಮೈಲಿಗಲ್ಲು ತಲುಪುವ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಭಾರತ ತಂಡ ಪಾತ್ರವಾಗಲಿದೆ" ಎಂದು ಜಿಸಿಎ ಟ್ವೀಟ್ ಮಾಡಿದೆ. ಪ್ರಸ್ತುತ ಕೋವಿಡ್ ಪರಿಸ್ಥಿತಿಯನ್ನು ಪರಿಗಣನೆಗೆ ತೆಗೆದುಕೊಂಡು ಎಲ್ಲಾ ಪಂದ್ಯಗಳು ಮುಚ್ಚಿದ ಕ್ರೀಡಾಂಗಣದಲ್ಲಿ ನಡೆಯಲಿವೆ ಎಂದು ಬೋರ್ಡ್ ಮತ್ತೊಂದು ಟ್ವೀಟ್ನಲ್ಲಿ ಹೇಳಿದೆ.
ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ