ಮುಂಬೈ:ಬಹುನಿರೀಕ್ಷಿತ ಮಹಿಳಾ ಐಪಿಎಲ್ ಭರ್ಜರಿ ಆರಂಭವಾಗಿದ್ದು, ಪ್ರೇಕ್ಷಕರನ್ನು ತನ್ನತ್ತ ಸೆಳೆಯುತ್ತಿದೆ. ಈವರೆಗೆ ನಡೆದ ನಾಲ್ಕು ಪಂದ್ಯಗಳಲ್ಲಿ ಸ್ಟೇಡಿಯಂ ಬಹುತೇಕ ತುಂಬಿದೆ. ಚುಟುಕು ಕ್ರಿಕೆಟ್ನಲ್ಲಿ ವನಿತೆಯರು ಲೀಲಾಜಾಲವಾಗಿ 150+ ರನ್ ಗಳಿಸುತ್ತಿದ್ದು ಸಿಕ್ಸ್, ಫೊರ್ಗಳಿಂದ ಪ್ರೇಕ್ಷಕರಿಗೆ ಭರಪೂರ ಮನರಂಜನೆ ಸಿಗುತ್ತಿದೆ.
ಮಹಿಳಾ ಪ್ರೀಮಿಯರ್ ಲೀಗ್‌ನ ಆಯೋಜಕರು 2023ರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಎಲ್ಲರಿಗೂ ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯಗಳ ಉಚಿತ ವೀಕ್ಷಣೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ನಾಳೆ ಮಾರ್ಚ್ 8 ಎಂದು ಮಹಿಳಾ ದಿನಾಚರಣೆ ಇದ್ದು, ಈ ದಿನ ಗುಜರಾತ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫೈಟ್ ಏರ್ಪಡಲಿದೆ.
ಮಾರ್ಚ್ 8 ರಂದು ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆಯಲಿರುವ ಗುಜರಾತ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದಲ್ಲಿ ಎಲ್ಲರಿಗೂ ಉಚಿತ ಪ್ರವೇಶವನ್ನು ಮಾಡಲಾಗಿದೆ. ಈ ಬಗ್ಗೆ ನಿನ್ನೆ ಸಂಜೆ ಬ್ರಬೋರ್ನ್ ಸ್ಟೇಡಿಯಂನಲ್ಲಿ ಆರ್ಸಿಬಿ ಮತ್ತು ಮುಂಬೈ ಪಂದ್ಯದ ವೇಳೆ ಮಾಹಿತಿ ನೀಡಲಾಗಿದೆ. ಆಯೋಜಕರು ನೀಡಿರುವ ಮಾಹಿತಿಯಲ್ಲಿ ಬ್ರೆಬೋರ್ನ್ ಕ್ರೀಡಾಂಗಣದಲ್ಲಿ ನಡೆಯಲಿರುವ ಗುಜರಾತ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವೆ ನಡೆಯಲಿರುವ ಪಂದ್ಯದಲ್ಲಿ ಪ್ರೇಕ್ಷಕರ ಪ್ರವೇಶ ಉಚಿತ ಎಂದು ಹೇಳಲಾಗಿದೆ.
ಮಹಿಳಾ ಪ್ರೀಮಿಯರ್ ಲೀಗ್‌ನ ಉದ್ಘಾಟನಾ ಕಾರ್ಯಕ್ರಮ ವೀಕ್ಷಣೆ ಮತ್ತು ಪಂದ್ಯಕ್ಕೆ ಯುವತಿಯರಿಗೆ ಮತ್ತು ಮಹಿಳೆಯರಿಗೆ ಉಚಿತ ಪ್ರವೇಶ ನೀಡಲಾಗಿತ್ತು. ಆದರೆ ಮಹಿಳಾ ದಿನಾಚರಣೆ ಪ್ರಯುಕ್ತ ಎಲ್ಲರಿಗೂ ಉಚಿತ ನೀಡುವುದಾಗಿ ವುಮೆನ್ಸ್ ಪ್ರೀಮಿಯರ್ ಲೀಗ್‌ನ ಟ್ವಿಟರ್ನಲ್ಲಿ ಪೋಸ್ಟ್ ಮಾಡಿಕೊಂಡಿದೆ. ಎರಡು ಸೋಲನುಭವಿಸಿರುವ ಗುಜರಾತ್ ಮತ್ತು ಬೆಂಗಳೂರು ತಂಡದಲ್ಲಿ ಯಾವುದು ಗೆಲುವಿನ ಲಯಕ್ಕೆ ಮರಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.