ಅಹಮದಾಬಾದ್ (ಗುಜರಾತ್):ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಗೆ ಇನ್ನು ಕೇವಲ ಐದು ದಿನಗಳು ಮಾತ್ರ ಬಾಕಿ ಇದೆ. ಪುರುಷರ ಐಪಿಎಲ್ನ ಟೈಟಲ್ ಪ್ರಯೋಜಕತ್ವ ವಹಿಸಿದ್ದ ಟಾಟಾ ಸಂಸ್ಥೆಯೇ ಡಬ್ಲ್ಯುಪಿಎಲ್ನ್ನು ಪ್ರಸ್ತುತ ಪಡಿಸುತ್ತಿದೆ. ಮೊದಲ ಆವೃತ್ತಿಗಾಗಿ ಗುಜರಾತ್ ಜೈಂಟ್ಸ್ ತಮ್ಮ ತಂಡದ ಜರ್ಸಿಯನ್ನು ಅನಾವರಣ ಮಾಡಿದೆ.
ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಫ್ರಾಂಚೈಸಿ ಗುಜರಾತ್ ಜೈಂಟ್ಸ್ ಭಾನುವಾರ ಟೂರ್ನಿಗಾಗಿ ತಮ್ಮ ಜೆರ್ಸಿಯನ್ನು ಅನಾವರಣಗೊಳಿಸಿದೆ. ಕಿತ್ತಳೆ ಬಣ್ಣದ ಜೆರ್ಸಿಯ ವಿಡಿಯೋವನ್ನು ಫ್ರಾಂಚೈಸಿಯ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಳ್ಳಲಾಗಿದೆ. ಜರ್ಸಿಯಲ್ಲಿ ಘರ್ಜಿಸುವ ಸಿಂಹ ಕಾಣಿಸಿಕೊಂಡಿದೆ.
ಡೆಲ್ಲಿ ಕ್ಯಾಪಿಟಲ್ಸ್, ಗುಜರಾತ್ ಜೈಂಟ್ಸ್, ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಯುಪಿ ವಾರಿಯರ್ಸ್ ಮೊದಲ ಆವೃತ್ತಿಯ ಡಬ್ಲ್ಯುಪಿಎಲ್‌ನಲ್ಲಿ ಪ್ರಶಸ್ತಿಗಾಗಿ ಸೆಣಸಿಲಿವೆ. ಮಾರ್ಚ್ 4 ರಿಂದ ಪಂದ್ಯಗಳು ಆರಂಭವಾಗಲಿದೆ. ಸ್ಮೃತಿ ಮಂಧಾನಾ ಅವರನ್ನು ಹರಾಜಿನಲ್ಲಿ 3.40 ಕೋಟಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಖರೀದಿಸಿದ್ದು, ಹರಾಜಿನಲ್ಲಿ ಅತೀ ಹೆಚ್ಚು ಮೊತ್ತಕ್ಕೆ ಬಿಡ್ ಆದ ಆಟಗಾರ್ತೀ ಆಗಿದ್ದಾರೆ.
ಮಹಿಳೆಯರ ಪ್ರೀಮಿಯರ್ ಲೀಗ್ (WPL) ನಲ್ಲಿ ಒಟ್ಟು 20 ಲೀಗ್ ಪಂದ್ಯಗಳು ಮತ್ತು ಎರಡು ಪ್ಲೇಆಫ್ ಪಂದ್ಯಗಳು ನಡೆಯಲಿವೆ. ಲೀಗ್‌ನ ಮೊದಲ ಪಂದ್ಯ ಮಾರ್ಚ್ 4 ರಂದು ಗುಜರಾತ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಟೂರ್ನಿಯಲ್ಲಿ ನಾಲ್ಕು ಡಬಲ್ ಹೆಡರ್‌ಗಳು ಇರುತ್ತವೆ. ಮೊದಲ ಪಂದ್ಯ ಮಧ್ಯಾಹ್ನ 3:30ಕ್ಕೆ ಹಾಗೂ ಎರಡನೇ ಪಂದ್ಯ ಸಂಜೆ 7:30ಕ್ಕೆ ನಡೆಯಲಿದೆ.
ಬ್ರಬೋರ್ನ್ ಕ್ರೀಡಾಂಗಣ ಮತ್ತು ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಒಟ್ಟು 11-11 ಪಂದ್ಯಗಳು ನಡೆಯಲಿವೆ. ಗುಜರಾತ್ ಜೈಂಟ್ಸ್ ತಂಡಕ್ಕೆ ನಾಯಕಿ ಯಾರೆಂದು ಇನ್ನೂ ಘೋಷಿಸಿಲ್ಲ, ಶೀಘ್ರದಲ್ಲೇ ಫ್ರಾಂಚೈಸಿ ತಿಳಿಸುವ ಸಾಧ್ಯತೆ ಇದೆ. ಮೂಲಗಳಿಂದ ಬಂದ ಮಾಹಿತಿಯಂತೆ ಆಸ್ಟ್ರೇಲಿಯಾದ ಆಶ್ಲೇ ಗಾರ್ಡ್ನರ್ ನಾಯಕಿಯಾಗುವ ಸಾಧ್ಯತೆ ಇದೆ.
ಗುಜರಾತ್ ಜೈಂಟ್ಸ್ ಶೆಡ್ಯೂಲ್: ಗುಜರಾತ್ ಜೈಂಟ್ಸ್ ಡಬ್ಲ್ಯುಪಿಎಲ್ನ ಮೊದಲ ಪಂದ್ಯವನ್ನು ಮುಂಬೈ ಇಂಡಿಯನ್ಸ್ ಜೊತೆ ಆಡಲಿದೆ. ಮಾರ್ಚ್ 5 ರಂದು ಎರಡನೇ ಪಂದ್ಯ ಯುಪಿ ವಾರಿಯರ್ಸ್ ವಿರುದ್ಧ ನಡೆಯಲಿದೆ. ಮಾರ್ಚ್ 8 ರಂದು ನಡೆಯಲಿರುವ ಮೂರನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಜೈಂಟ್ಸ್ ಎದುರಿಸಲಿದೆ. ನಾಲ್ಕನೇ ಪಂದ್ಯ ಮಾರ್ಚ್ 11 ರಂದು ಡೆಲ್ಲಿ ಕ್ಯಾಪಿಟಲ್ಸ್‌ನಿಂದ ನಡೆಯಲಿದೆ. 5 ನೇ ಪಂದ್ಯ ಗುಜರಾತ್ ಜೈಂಟ್ಸ್ ಮಾರ್ಚ್ 14 ರಂದು ಮುಂಬೈ ಇಂಡಿಯನ್ಸ್ ವಿರುದ್ಧ ಆಡಲಿದೆ. ಮಾರ್ಚ್ 16 ರಂದು ಡೆಲ್ಲಿ ಕ್ಯಾಪಿಟಲ್ಸ್ ಆರನೇ ಪಂದ್ಯವನ್ನು, ಮಾರ್ಚ್ 18 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 7 ನೇ ಪಂದ್ಯ, ಮಾರ್ಚ್ 20 ರಂದು ಯುಪಿ ವಾರಿಯರ್ಸ್ ವಿರುದ್ಧ 8 ನೇ ಪಂದ್ಯವನ್ನು ಆಡಲಿದೆ.
ಗುಜರಾತ್ ಜೈಂಟ್ಸ್ ತಂಡ:ಆಶ್ಲೀಗ್ ಗಾರ್ಡ್ನರ್, ಬೆತ್ ಮೂನಿ, ಸೋಫಿಯಾ ಡಂಕ್ಲೆ, ಅನ್ನಾಬೆಲ್ ಸದರ್ಲ್ಯಾಂಡ್, ಹರ್ಲೀನ್ ಡಿಯೋಲ್, ಡಿಯಾಂಡ್ರಾ ಡಾಟಿನ್, ಸ್ನೇಹ ರಾಣಾ, ಎಸ್ ಮೇಘನಾ, ಜಾರ್ಜಿಯಾ ವೇರ್ಹ್ಯಾಮ್, ಮಾನಸಿ ಜೋಶಿ, ದಯಾಲನ್ ಹೇಮಲತಾ, ಮೋನಿಕಾ ಪಟೇಲ್, ತನುಜಾ ಕನ್ವರ್, ಸುಷ್ಮಾ ವರ್ಮಾ, ಹರ್ವಾಲಿ ಜಿ ಕುಮಾರಿ, ಪರುಣಿಕಾ ಸಿಸೋಡಿಯಾ, ಶಬ್ಮಾನ್ ಶಕೀಲ್.
ಇದನ್ನೂ ಓದಿ:ICC women's t20 .. 6ನೇ ಬಾರಿ ವಿಶ್ವಕಪ್ ಕಿರೀಟ ಮುಡಿಗೇರಿಸಿಕೊಂಡ ಆಸೀಸ್ ಟೀಂ