ಟಿ 20 ಕ್ರಿಕೆಟ್ನಲ್ಲಿ ಅಚ್ಚರಿಯ ಫಲಿತಾಂಶಗಳಿಗೆ ಕೊರತೆಯಿಲ್ಲ. ಅದು ಚಾಲ್ತಿಯಲ್ಲಿರುವ ಟಿ20 ವಿಶ್ವಕಪ್ನಲ್ಲೂ ಸಾಗಿದೆ. ಸೆಮೀಸ್ ಸೇರುವ ತಂಡಗಳಲ್ಲಿ ಒಂದಾಗಿದ್ದ ದಕ್ಷಿಣ ಆಫ್ರಿಕಾವನ್ನು ಚೆಂಡಾಡಿದ ಕ್ರಿಕೆಟ್ ಶಿಶು ನೆದರ್ಲ್ಯಾಂಡ್ ಹರಿಣಗಳನ್ನು ಟೂರ್ನಿಯಿಂದಲೇ ಹೊರದಬ್ಬಿತು. ದಕ್ಷಿಣ ಆಫ್ರಿಕಾಗೆ ಈ ಸೋಲು ಎಂದಿಗೂ ಮಾಸದ ಗಾಯ. ಇದಕ್ಕೂ ಮೊದಲು ಇಂಗ್ಲೆಂಡ್ಗೆ ಐರ್ಲೆಂಡ್ ತಂಡ ಶಾಕ್ ನೀಡಿತ್ತು. ಪಾಕಿಸ್ತಾನಕ್ಕೆ ಜಿಂಬಾಬ್ವೆ ಸೋಲಿನ ಬರೆ ಎಳೆದಿತ್ತು.
ಇದೇ ರೀತಿ ಹಿಂದಿನ ಆವೃತ್ತಿಗಳಲ್ಲೂ ಕ್ರಿಕೆಟ್ ಶಿಶುಗಳು ಬಲಿಷ್ಠ ತಂಡಗಳನ್ನು ಕೆಡವಿದ ಉದಾಹರಣೆಗಳಿವೆ. ಪ್ರಮುಖ ಘಟ್ಟದಲ್ಲಿ ತಂಡಗಳನ್ನು ಸೋಲಿಸುವ ಮೂಲಕ ಕೆಲ ತಂಡಗಳಿಗೆ ಟೂರ್ನಿಯಿಂದಲೇ ಗೇಟ್ ಪಾಸ್ ಕೊಡಿಸಿದರೆ, ಇನ್ನೂ ಕೆಲವಕ್ಕೆ ಅಂಕಪಟ್ಟಿಯಲ್ಲಿ ಅಡ್ಡಿಯುಂಟು ಮಾಡಿವೆ. ವಿಶ್ವಕಪ್ನಲ್ಲಿ ಯಾವೆಲ್ಲಾ ತಂಡಗಳು ಬಲಿಷ್ಠ ತಂಡಗಳಿಗೆ ಸೋಲುಣಿಸಿವೆ ಎಂಬುದರ ಮಾಹಿತಿ ಇಲ್ಲಿದೆ.
ಆಸ್ಟ್ರೇಲಿಯಾಗೆ ಕಾಡಿದ್ದ ಜಿಂಬಾಬ್ವೆ:2007 ರ ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾ ಜಿಂಬಾಬ್ವೆ ವಿರುದ್ಧ ಸೋಲು ಕಂಡಿತ್ತು. ಎಲ್ಟನ್ ಚಿಗುಂಬರಾ ದಾಳಿಗೆ ನಲುಗಿದ್ದ ಆಸೀಸ್ ಪಡೆ 138 ರನ್ಗೆ ಆಲೌಟ್ ಆಗಿತ್ತು. ಚಿಗುಂಬರಾ 3 ವಿಕೆಟ್ ಕಿತ್ತಿದ್ದರು. ಬ್ಯಾಟಿಂಗ್ನಲ್ಲಿ ಮಿಂಚಿದ್ದ ಬ್ರೆಂಡೆನ್ ಟೈಲರ್ 45 ಎಸೆತಗಳಲ್ಲಿ 60 ರನ್ ಮಾಡಿದ್ದರು.
ಇಂಗ್ಲೆಂಡ್ಗೆ ನೆದರ್ಲ್ಯಾಂಡ್ಸ್ ಸ್ಟ್ರೈಕ್: 2009 ರ ವಿಶ್ವಪ್ನಲ್ಲಿ ಮೊದಲ ಬಾರಿಗೆ ವಿಶ್ವಕಪ್ನಲ್ಲಿ ಸ್ಥಾನ ಪಡೆದಿದ್ದ ನೆದರ್ಲ್ಯಾಂಡ್ ಇಂಗ್ಲೆಂಡ್ಗೆ ಸೋಲಿನ ಕಹಿ ತೋರಿಸಿತ್ತು. ಮಳೆಯ ಕಾಟದ ಮಧ್ಯೆಯೂ 162 ರನ್ ಗುರಿಯನ್ನು ನೆದರ್ಲ್ಯಾಂಡ್ಸ್ ದಾಟಿತ್ತು. ಇದು ಆ ತಂಡಕ್ಕೆ ವಿಶ್ವಕಪ್ನಲ್ಲಿ ದಾಖಲಾದ ಮೊದಲ ಜಯವಾಗಿತ್ತು.
ಐರ್ಲೆಂಡ್ನಿಂದ ಸೋತಿದ್ದ ಬಾಂಗ್ಲಾ-2009:ವಿಶ್ವಕಪ್ನಲ್ಲಿ ಅತಿ ಹೆಚ್ಚು ಬಾರಿ ಶಾಕಿಂಗ್ ಫಲಿತಾಂಶಕ್ಕೆ ಒಳಗಾದ ತಂಡ ಬಾಂಗ್ಲಾದೇಶ. 2009 ರ ಆವೃತ್ತಿಯಲ್ಲಿ ಐರ್ಲೆಂಡ್ ತಂಡದೆದುರು ಸೋತು ಭಾರಿ ಮುಖಭಂಗಕ್ಕೆ ಒಳಗಾಗಿತ್ತು. ಐರ್ಲೆಂಡ್ ಪಡೆ ನೀಡಿದ್ದ 137 ರನ್ ಸಾಧಾರಣ ಮೊತ್ತ ಭೇದಸಲಾಗದೇ 90 ರನ್ಗೆ ಸೋಲು ಕಂಡಿತ್ತು.
ಇಂಗ್ಲೆಂಡ್ ಗರ್ವ ಮುರಿದಿದ್ದ ನೆದರ್ಲ್ಯಾಂಡ್ಸ್-2014:2009 ರ ವಿಶ್ವಕಪ್ನಲ್ಲಿ ಇಂಗ್ಲೆಂಡ್ಗೆ ಸೋಲುಣಿಸಿದ್ದ ನೆದರ್ಲ್ಯಾಂಡ್ಸ್ ತಂಡ 5 ವರ್ಷಗಳ ಬಳಿಕ 2014 ರ ಚುಟುಕು ವಿಶ್ವಕಪ್ನಕಲ್ಲೂ ಶಾಕ್ ನೀಡಿತು. ಟೂರ್ನಿಯಿಂದ ಹೊರಬಿದ್ದು ನಿರಾಸೆ ಅನುಭವಿಸಿದ್ದ ಇಂಗ್ಲೆಂಡ್ ಆಡಿದ ಔಪಚಾರಿಕ ಪಂದ್ಯದಲ್ಲೂ ಸೋಲು ಕಾಣುವಂತಾಯಿತು. 133 ರನ್ಗೆ ಡಚ್ ಪಡೆಯನ್ನು ಕಟ್ಟಿಹಾಕಿದ್ದರೂ, 110 ರನ್ ಗಳಿಸಲು ಮಾತ್ರ ಶಕ್ತವಾಗಿ ಬ್ರಿಟಿಷರು ಸೋತಿದ್ದರು.
ಹಾಂಕಾಂಗ್ ಕೈಯಲ್ಲಿ ಬಾಂಗ್ಲಾಗೆ ಮುಖಭಂಗ:2014 ರ ಟೂರ್ನಿಯಲ್ಲಿ ಮತ್ತೊಂದು ಅಚ್ಚರಿಯ ಫಲಿತಾಂಶ ನೀಡಿದ್ದು ಕ್ರಿಕೆಟ್ ಶಿಶು ಹಾಂಕಾಂಗ್ ಪಡೆ. ಬಾಂಗ್ಲಾದೇಶವನ್ನು 108 ರನ್ಗೆ ತಡೆದಿದ್ದ ಹಾಂಕಾಂಗ್ ಕೊನೆಯ ಓವರ್ನಲ್ಲಿ ವಿಕ್ಟರಿ ಸಾಧಿಸಿತ್ತು. ಈ ಸೋಲು ಬಾಂಗ್ಲಾಗೆ ಮುಳ್ಳಾಗಿ ಕಾಡಿತ್ತು.