2023ರ ಐಸಿಸಿ ಏಕದಿನ ವಿಶ್ವಕಪ್ ಆರಂಭಕ್ಕೆ ಇನ್ನು 2 ತಿಂಗಳು ಮಾತ್ರ ಬಾಕಿ ಉಳಿದಿದೆ. ವಿಶ್ವಕಪ್ 2023ರ ಉದ್ಘಾಟನಾ ಪಂದ್ಯವು ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ನಡುವೆ ಅಕ್ಟೋಬರ್ 5 ರಂದು ನಡೆಯಲಿದೆ. ಇದಕ್ಕೂ ಮುನ್ನ ನ್ಯೂಜಿಲೆಂಡ್‌ಗೆ ಶುಭ ಸುದ್ದಿ ಸಿಕ್ಕಂತಾಗಿದೆ. ನ್ಯೂಜಿಲೆಂಡ್ ನಾಯಕ ಬಲಗೈ ಸ್ಟಾರ್ ಬ್ಯಾಟರ್ ಕೇನ್ ವಿಲಿಯಮ್ಸನ್ ಗಾಯದಿಂದ ಚೇತರಿಸಿಕೊಂಡ ಬಳಿಕ ನೆಟ್ ಅಭ್ಯಾಸ ಆರಂಭಿಸಿದ್ದಾರೆ.
ವಿಲಿಯಮ್ಸನ್ ನೆಟ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದರೆ ವಿಶ್ವಕಪ್ ಒಳಗೆ ಸಂಪೂರ್ಣ ಫಿಟ್ ಆಗಿ ಮೈದಾನಕ್ಕೆ ಮರಳಲು ಸಾಧ್ಯವಾಗುವುದೇ ಇಲ್ಲವೇ ಎಂಬುದು ದೊಡ್ಡ ಪ್ರಶ್ನೆಯಾಗಿಯೇ ಉಳಿದಿದೆ.
ಕೇನ್ ವಿಲಿಯಮ್ಸನ್ ನ್ಯೂಜಿಲೆಂಡ್‌ನ ಸ್ಟಾರ್ ಬ್ಯಾಟ್ಸ್‌ಮನ್ ವಿಲಿಯಮ್ಸನ್ ಅವರ ವೈರಲ್ ವಿಡಿಯೋವನ್ನು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ವಿಲಿಯಮ್ಸನ್ ನೆಟ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿರುವುದನ್ನು ಕಾಣಬಹುದು. ವಿಡಿಯೋದಲ್ಲಿ, ವಿಲಿಯಮ್ಸನ್ ಸಂಪೂರ್ಣವಾಗಿ ಫಿಟ್ ಆಗಿ ಕಾಣಿಸಿಕೊಂಡಿದ್ದಾರೆ ಮತ್ತು ಎಲ್ಲಾ ರೀತಿಯ ಕ್ರಿಕೆಟ್ ಹೊಡೆತಗಳನ್ನು ಹೊಡೆಯುತ್ತಿದ್ದಾರೆ. ವಿಶ್ವಕಪ್‌ಗೂ ಮುನ್ನ ವಿಲಿಯಮ್ಸನ್‌ಗೆ ಫಿಟ್ ಆಗಲು ಸಾಧ್ಯವಾಗದಿದ್ದರೆ, ಅವರು ಮೆಂಟರ್‌ನ ಪಾತ್ರದಲ್ಲಿ ತಂಡದೊಂದಿಗೆ ಭಾರತಕ್ಕೆ ಬರುತ್ತಾರೆ ಎಂಬ ಸುದ್ದಿ ಕೆಲವು ದಿನಗಳ ಹಿಂದೆ ಇತ್ತು. ಆದರೆ ವಿಲಿಯಮ್ಸನ್ ವಿಶ್ವಕಪ್‌ನಲ್ಲಿ ಆಡುವ ಭರವಸೆಯನ್ನು ಬಿಟ್ಟುಕೊಟ್ಟಿಲ್ಲ. ವಿಶ್ವಕಪ್‌ನಲ್ಲಿ ಆಡಲು ಅವರು ಸಿದ್ಧ ಎಂಬ ಸಂದೇಶವನ್ನು ತಮ್ಮ ಕ್ರಿಕೆಟ್ ಮಂಡಳಿಗೆ ಕೊಡುತ್ತಿದ್ದಾರೆ. ಅಲ್ಲದೇ ವಿಶ್ವಕಪ್ ಹಿನ್ನೆಲೆಯಲ್ಲಿ ಅವರು ಕಠಿಣ ಪರಿಶ್ರಮದಲ್ಲಿ ನಿರತರಾಗಿದ್ದಾರೆ.