ಸಿಡ್ನಿ(ಆಸ್ಟ್ರೇಲಿಯಾ):ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಡುವಿನ ಟಿ20 ವಿಶ್ವಕಪ್ ಮೊದಲ ಸೂಪರ್ 12 ಪಂದ್ಯದಲ್ಲಿ ಗ್ಲೆನ್ ಫಿಲಿಪ್ಸ್ "ಸೂಪರ್ ಮ್ಯಾನ್" ಕ್ಯಾಚ್ ಹಿಡಿದು ಕ್ರೀಡಾಂಗಣವನ್ನೇ ದಂಗು ಬಡಿಸಿದ್ದಾರೆ.
ವಿಶ್ವಕಪ್ನ ಮೊದಲ ಪಂದ್ಯವೇ ಅಚ್ಚರಿಯ ಕಾರಣಗಳಿಗೆ ಸಾಕ್ಷಿಯಾಗಿದೆ. ಆಸ್ಟ್ರೇಲಿಯಾ ಬ್ಯಾಟರ್ಗಳ ಕಳಪೆ ಆಟದಿಂದ ನ್ಯೂಜಿಲೆಂಡ್ ಎದುರು 89 ರನ್ಗಳ ಹೀನಾಯ ಸೋಲು ಕಂಡಿದೆ. ಡಾರ್ಕ್ಹಾರ್ಸ್ ಕುಖ್ಯಾತಿಯ ನ್ಯೂಜಿಲೆಂಡ್ ಮಾತ್ರ ಎಲ್ಲರೂ ಕಣ್ಣರಳಿಸುವ ಸಾಧನೆ ಮಾಡಿದೆ.
ಸೂಪರ್ಮ್ಯಾನ್ ಫಿಲಿಪ್ಸ್:ಬ್ಲ್ಯಾಕ್ಸ್ಕ್ಯಾಪ್ಸ್ ನೀಡಿದ 201 ರನ್ಗಳ ಗುರಿ ಬೆನ್ನತ್ತಿದ ಆಸೀಸ್ ಪಡೆ 34 ರನ್ಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ವೇಳೆ ಮೈದಾನಕ್ಕಿಳಿದ ಫಿನಿಶರ್ ಖ್ಯಾತಿಯ ಮಾರ್ಕಸ್ ಸ್ಟೊಯಿನೀಸ್ ಬಿರುಸಿನ ಆಟವಾಡಲು ಮುಂದಾದರು. ನ್ಯೂಜಿಲೆಂಡ್ನ ಮಿಚೆಲ್ ಸ್ಯಾಂಟ್ನರ್ ಓವರ್‌ನಲ್ಲಿ ಸಿಕ್ಸರ್ ಬಾರಿಸಲು ಸ್ಟೊಯಿನೀಸ್ ಮುನ್ನುಗ್ಗಿ ಬಂದು ಹೊಡೆದಾಗ ಚೆಂಡು ಆಕಾಶದೆತ್ತರಕ್ಕೆ ಹಾರಿತು.