ಕೋಲ್ಕತ್ತಾ (ಪಶ್ಚಿಮ ಬಂಗಾಳ):2023ರ ಐಸಿಸಿ ವಿಶ್ವಕಪ್ ಅನ್ನು ಎರಡು ಸೋಲಿನಿಂದ ಆರಂಭಿಸಿದ ಆಸ್ಟ್ರೇಲಿಯಾ ತಂಡ ನಂತರ ಏಳು ಪಂದ್ಯಗಳಲ್ಲಿ ಜಯಗಳಿಸಿದ್ದು, ಗುರುವಾರ ಇಲ್ಲಿನ ಈಡನ್ ಗಾರ್ಡನ್‌ನಲ್ಲಿ ನಡೆಯಲಿರುವ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ.
ಆಸೀಸ್ ನಾಯಕ ಪ್ಯಾಟ್ ಕಮಿನ್ಸ್ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಹೆಚ್ಚು ಧನಾತ್ಮಕ ಮನೋಭಾವದಲ್ಲಿ ಆಡಲಿಚ್ಛಿಸಿರುವುದಾಗಿ ಹೇಳಿಕೊಂಡಿದ್ದಾರೆ. ಕಮಿನ್ಸ್ ಆಸ್ಟ್ರೇಲಿಯಾದ ನಾಯಕತ್ವವನ್ನು ವಹಿಸಿಕೊಂಡ ನಂತರ ಪಂದ್ಯಾವಳಿಯ ನಾಕೌಟ್ ಹಂತದಲ್ಲಿ ಮೊದಲ ಬಾರಿಗೆ ಕಾಣಿಸಿಕೊಳ್ಳಲಿದ್ದಾರೆ. ಲೀಗ್ ಹಂತದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಆಸ್ಟ್ರೇಲಿಯಾ ಸೋಲುನುಭವಿಸಿದ್ದು, ಇದರ ಸೇಡನ್ನು ನಾಕೌಟ್ ಹಂತದಲ್ಲಿ ತೀರಿಸಿಕೊಳ್ಳಲು ಕಾಂಗರೂ ಪಡೆ ಸಜ್ಜಾಗುತ್ತದೆ.
ಪಂದ್ಯದ ಮುನ್ನಾದಿನ ಮಾತನಾಡಿದ ಆಸಿಸ್ ನಾಯಕ ಪ್ಯಾಟ್ ಕಮಿನ್ಸ್, "ಮಿಚೆಲ್ ಮಾರ್ಷ್ ಅವರ 177 ಇನ್ನಿಂಗ್ಸ್ ಹಾಗೇ ಗ್ಲೆನ್ ಮ್ಯಾಕ್ಸ್‌ವೆಲ್ ಇನ್ನಿಂಗ್ಸ್ (201) ನಮಗೆ ಸ್ಫೂರ್ತಿ ನೀಡಿತು. ಸೋಲಿನ ಅಂಚಿನಲ್ಲಿರುವ ತಂಡವನ್ನು ಗೆಲುವಿನತ್ತ ಮುನ್ನಡೆಸುವಂತಹ ಆಟಗಾರರು ಇದ್ದಾಗ ಜಯ ಸನಿಹವಾಗುತ್ತದೆ. ತಂಡದಲ್ಲಿ ಮ್ಯಾಕ್ಸ್‌ವೆಲ್ ಅವರಂತಹವರು ಇರುವುದು ತಂಡಕ್ಕೆ ಸಹಕಾರಿ ಆಗುತ್ತಾರೆ. ಅವರು ತಂಡದಲ್ಲಿರುವುದರಿಂದ ಯಾವುದೇ ಪರಿಸ್ಥಿತಿಯಲ್ಲಿ ಪಂದ್ಯದ ಗತಿಯನ್ನ ತಿರುಗಿಸಬಹುದು. ನಮ್ಮ ತಂಡದಲ್ಲಿ ಅವರಂತಹವರು ಇದ್ದಾರೆ ಎಂಬುದೇ ಸಂತಸ" ಎಂದು ಹೇಳಿದ್ದಾರೆ.
ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಆಯಾಸದ ನಡುವೆಯೂ ಇನ್ನಿಂಗ್ಸ್ ಕಟ್ಟಿದ ಮ್ಯಾಕ್ಸ್‌ವೆಲ್ ಸೆಮಿಫೈನಲ್ ಪಂದ್ಯಕ್ಕೆ ಫಿಟ್ ಆಗಿದ್ದಾರೆ ಎಂದು ಕಮಿನ್ಸ್ ಇದೇ ವೇಳೆ ತಿಳಿಸಿದ್ದಾರೆ. ತಂಡದಲ್ಲಿರುವ ಪ್ರತಿಯೊಬ್ಬ ಕ್ರಿಕೆಟಿಗರು ಲಯದಲ್ಲಿರುವಾಗ ಆಸ್ಟ್ರೇಲಿಯಾ ಚಾಂಪಿಯನ್ ಆಗುವತ್ತ ಚಿಂತಿಸುತ್ತಿದೆ.