ಡರ್ಬನ್ (ದಕ್ಷಿಣ ಆಫ್ರಿಕಾ): ವಿಶ್ವಕಪ್ಗೆ ಒಂದು ತಿಂಗಳು ಬಾಕಿ ಇರುವಾಗ ಆಸ್ಟ್ರೇಲಿಯಾ ತಂಡಕ್ಕೆ ಗಾಯದ ಸಮಸ್ಯೆ ಕಾಡುತ್ತಿದೆ. ವಿಶ್ವಕಪ್ನ ತಯಾರಿಗಾಗಿ ದಕ್ಷಿಣಆಫ್ರಿಕಾ ಪ್ರವಾಸದಲ್ಲಿರುವ ಆಸಿಸ್ ತಂಡಕ್ಕೆ ಮೊದಲ ಪಂದ್ಯಕ್ಕೂ ಮುನ್ನ ಆಘಾತ ಉಂಟಾಗಿದೆ. ಆಸ್ಟ್ರೇಲಿಯಾದ ಸ್ಟಾರ್ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಗಾಯಕ್ಕೆ ತುತ್ತಾಗಿದ್ದಾರೆ. ಈ ಕಾರಣ ಅವರು ತವರಿಗೆ ಮರಳುವ ಸಾಧ್ಯತೆಯೂ ಇದೆ.
ಇದೇ (ಆಗಸ್ಟ್) ತಿಂಗಳ 30 ರಿಂದ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವೆ 3 ಟಿ20 ಮತ್ತು 5 ಏಕದಿನ ಪಂದ್ಯಗಳ ಎರಡು ಸರಣಿ ನಡೆಯಲಿದೆ. ಈ ಸರಣಿ ಸಪ್ಟೆಂಬರ್ 17ಕ್ಕೆ ಮುಕ್ತಾಯವಾಗಲಿದೆ. ನಂತರ ಆಸಿಸ್ ತಂಡ ಭಾರತದ ವಿರುದ್ಧ ಏಕದಿನ ಸರಣಿಯನ್ನು ವಿಶ್ವಕಪ್ಗೆ ಎರಡು ವಾರ ಇರುವಂತೆ ಆಡಲಿದೆ.
ಬುಧವಾರ ನಡೆಯಲಿರುವ ಹರಿಣಗಳ ವಿರುದ್ಧದ ಟಿ20 ಸರಣಿಯ ಮೊದಲಕ್ಕೆ ತಯಾರಿ ನಡೆಸುತ್ತಿರುವಾಗ ಡರ್ಬನ್‌ನಲ್ಲಿ ಮ್ಯಾಕ್ಸ್‌ವೆಲ್ ಪಾದದ ನೋವಿಗೆ ತುತ್ತಾಗಿದ್ದಾರೆ. ಚೇತರಿಕೆಗೆ ಅವರು ಆಸ್ಟ್ರೇಲಿಯಾಕ್ಕೆ ತೆರಳಲಿದ್ದಾರೆ. ಇದೇ ವೇಳೆ ಮ್ಯಾಕ್ಸ್‌ವೆಲ್ ತಮ್ಮ ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದು, ಈ ವೇಳೆ ಕುಟುಂಬದೊಂದಿಗೆ ಸಮಯ ಕಳೆಯುತ್ತಾ, ಚೇತರಿಕೆಯ ಕಡೆ ಗಮನ ಹರಿಸಲಿದ್ದಾರೆ ಎನ್ನಲಾಗಿದೆ. ಗಾಯದ ಬಗ್ಗೆ ಹೆಚ್ಚು ಗಮನ ಹರಿಸಿರುವ ಮ್ಯಾಕ್ಸ್‌ವೆಲ್ ಆದಷ್ಟು ಬೇಗ ತಂಡಕ್ಕೆ ಮರಳುವ ನಿರೀಕ್ಷೆಯಲ್ಲಿದ್ದಾರೆ.
ವಿಶ್ವಕಪ್ಗೂ ಮುನ್ನ ಭಾರತದಲ್ಲಿ ನಡೆಯುವ ಏಕದಿನ ಸರಣಿಗೆ ಮರಳುವ ನಿರೀಕ್ಷೆ ಇದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ (ಐಸಿಸಿ) ಮಾಹಿತಿ ನೀಡಿದೆ. ಮ್ಯಾಕ್ಸ್‌ವೆಲ್ 128 ಏಕದಿನ ಪಂದ್ಯಗಳನ್ನು ಆಡಿದ್ದು, 33.88 ಸರಾಸರಿ ಮತ್ತು 124.82 ಸ್ಟ್ರೈಕ್ ರೇಟ್‌ನಲ್ಲಿ 3490 ರನ್ ಗಳಿಸಿದ್ದಾರೆ. 5.56 ಎಕಾನಮಿ ರೇಟ್‌ನೊಂದಿಗೆ 60 ವಿಕೆಟ್‌ಗಳನ್ನು ಸಹ ಪಡೆದಿದ್ದಾರೆ.