ಸಿಡ್ನಿ: ಆಸ್ಟ್ರೇಲಿಯಾ ತಂಡದ ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್ ಅವರನ್ನು ಕ್ರಿಕೆಟ್ ಆಸ್ಟ್ರೇಲಿಯಾ ರಾಕ್ಷಸನ ರೀತಿ ಬಿಂಬಿಸುತ್ತಿದೆ ಎಂದು ಮಾಜಿ ವಿಕೆಟ್ ಕೀಪರ್ ಆ್ಯಡಮ್ ಗಿಲ್‌ಕ್ರಿಸ್ಟ್ ಮಂಡಳಿ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆಸ್ಟ್ರೇಲಿಯಾ ತಂಡ ಬಾಲ್ ಟ್ಯಾಂಪರಿಂಗ್ ಪ್ರಕರಣದಲ್ಲಿ ಸಿಲುಕಿದ್ದ ವೇಳೆ ಲ್ಯಾಂಗರ್ ತಂಡದ ಮುಖ್ಯ ಕೋಚ್ ಆಗಿ ನೇಮಕವಾಗಿದ್ದರು. ಆದರೆ, ಸಾಕಷ್ಟು ಗೊಂದಲಗಳ ನಡುವೆ ಶನಿವಾರ ದಿಢೀರ್ ರಾಜೀನಾಮೆ ಸಲ್ಲಿಸಿದ್ದರು. ರಾಷ್ಟ್ರೀಯ ತಂಡದ ಆಟಗಾರರಿಂದ ಸೂಕ್ತ ಬೆಂಬಲ ಇಲ್ಲದ ಕಾರಣ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬ ಕೂಗು ಸಹಾ ಕೇಳಿ ಬಂದಿತ್ತು. ಆದರೆ, ತಂಡವನ್ನು ಟಿ-20 ವಿಶ್ವಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದ ಕೋಚ್ ಅವರನ್ನು ಕೀಳು ಮಟ್ಟದಲ್ಲಿ ನಡೆಸಿಕೊಂಡಿದೆ ಎಂದು ಕೆಲವು ಮಾಜಿ ಕ್ರಿಕೆಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಕೋಚಿಂಗ್ ಸ್ಥಾನದ ಪರಿವರ್ತನೆ ಮತ್ತು ವಿಶ್ಲೇಷಣೆ ಹಾಗೂ ವಿಕಸದ ಅಗತ್ಯತೆ ಬಗ್ಗೆ ಕಾರ್ಪೋರೇಟ್ ಹೇಳಿಕೆಗಳನ್ನು ಕೇಳಲು ನಾನು ಬಯಸುವುದಿಲ್ಲ. ತಂಡದಲ್ಲಿ ಆಟಗಾರರು ಮತ್ತು ಕೆಲವು ಬೆಂಬಲ ಸಿಬ್ಬಂದಿ ಜಸ್ಟಿನ್ ಅವರನ್ನು ಮುಂದುವರಿಸಲು ಬಯಸುವುದಿಲ್ಲ ಎಂದು ತಿಳಿಸಿರುವುದನ್ನು ಮಂಡಳಿ ಮುಚ್ಚಿಡುತ್ತಿದೆ. ಕೆಲವು ನಿರ್ದಿಷ್ಠ ಜನರು ಲ್ಯಾಂಗರ್ರನ್ನು ರಾಕ್ಷಸನಂತೆ ಚಿತ್ರಿಸುತ್ತಿದ್ದಾರೆ" ಎಂದು ಗಿಲ್‌ಕ್ರಿಸ್ಟ್ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.