ಸೌತಾಂಪ್ಟನ್: ಇಂಗ್ಲೆಂಡ್ನಲ್ಲಿ ಆಡುವಾಗ ಬ್ಯಾಟ್ಸ್ಮನ್ಗಳು ರನ್ಗಳಿಸುವುದಕ್ಕೆ ಮುಂದಾಗುವ ಮುನ್ನ ಪಿಚ್ಗೆ ಮೊದಲು ಹೊಂದಿಕೊಳ್ಳಬೇಕು, ನಂತರ ರನ್ಗಳಿಕೆಗೆ ಮುಂದಾಗಬೇಕೆಂದು ಭಾರತ ಟೆಸ್ಟ್ ತಂಡದ ಉಪನಾಯಕ ಅಜಿಂಕ್ಯ ರಹಾನೆ ತಿಳಿಸಿದ್ದಾರೆ.
ಭಾರತ ಜೂನ್ 18ರಂದು ಸೌತಾಂಪ್ಟನ್ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಚೊಚ್ಚಲ ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಸೆಣಸಾಡಲಿದೆ. ಈಗಾಗಲೇ ಎಲ್ಲಾ ಐಸಿಸಿ ಇವೆಂಟ್ಗಳಲ್ಲಿ ಫೈನಲ್ ತಲುಪಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಟೀಮ್ ಇಂಡಿಯಾ, ಒಂದು ವೇಳೆ ಈ ಪ್ರಶಸ್ತಿ ಗೆದ್ದರೆ ಎಲ್ಲಾ ಟ್ರೋಫಿ ಗೆದ್ದ ವಿಶ್ವದ ಏಕೈಕ ತಂಡ ಎನಿಸಿಕೊಳ್ಳಲಿದೆ.
ಇಂಗ್ಲೆಂಡ್ನಲ್ಲಿ ಉತ್ತಮವಾಗಿ ಬ್ಯಾಟಿಂಗ್ ಮಾಡಬೇಕೆಂದರೆ ಮೊದಲು ನೀವು ಅಲ್ಲಿನ ಪಿಚ್ಗಳಿಗೆ ಹೊಂದಿಕೊಳ್ಳಬೇಕು, ಅದು ಅಂತಹ ಸ್ಥಳ ಆಗಿದೆ. ನಾನು ಯಾವಾಗಲೂ ಇದನ್ನೇ ನಂಬುತ್ತೇನೆ. ಏಕೆಂದರೆ ನೀವು ಪಿಚ್ಗೆ ಎಷ್ಟು ಹತ್ತಿರ ಆಗುತ್ತೀರಾ ಮತ್ತು ನಂತರ ಹೇಗೆ ಆಡುತ್ತೀರಾ ಎಂಬುದು ಮಹತ್ವದ ಸಂಗತಿ ಎಂದು ಬಿಸಿಸಿಐ ಟಿವಿ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಅವರು ಹೇಳಿದ್ದಾರೆ.
ನಾನೊಬ್ಬ ಬ್ಯಾಟ್ಸ್ಮನ್ ಆಗಿ ಹೇಳುವುದೇನೆಂದರೆ, ನೀವು ಪಿಚ್ಗೆ ಹೊಂದಿಕೊಳ್ಳದಿದ್ದರೆ, ನೀವು 70-80 ರನ್ಗಳಿಸಿದಾಗಲೂ ಕೇವಲ ಒಂದು ಸಾಮಾನ್ಯ ಎಸೆತ ನಿಮ್ಮನ್ನು ಔಟ್ ಮಾಡುವ ಸಾಧ್ಯತೆಯಿರುತ್ತದೆ ಎಂದು 33 ವರ್ಷದ ಬ್ಯಾಟ್ಸ್ಮನ್ ಹೇಳಿದ್ದಾರೆ.