ಬೆಂಗಳೂರು:ಭಾರತದಲ್ಲಿ ಕ್ರಿಕೆಟ್ಗೆ ಹೆಚ್ಚು ಪ್ರಾಶಸ್ತ್ಯ ದೊರೆಯುತ್ತಿದೆ. ಲೀಗ್ ಪಂದ್ಯಗಳು ಮತ್ತು ದೇಶೀಯ ಟೂರ್ನಿಗಳಿಂದ ಇನ್ನಷ್ಟೂ ಜನಪ್ರಿಯತೆ ಹೆಚ್ಚಾಗಿದೆ. ಭಾರತದಲ್ಲಿ ನಡೆಯುವ ಐಪಿಎಲ್ಗೆ ಅನೇಕ ದೇಶಗಳಲ್ಲಿ ಹೆಚ್ಚಿನ ಬೇಡಿಕೆ ಇದೆ. ಐಪಿಎಲ್ ಪಂದ್ಯಗಳು ನಡೆಯುವ ಸಂದರ್ಭದಲ್ಲಿ ಯಾವುದೇ ಅಂತಾರಾಷ್ಟ್ರೀಯ ದ್ವಿಪಕ್ಷೀಯ ಪಂದ್ಯಗಳು ಆಯೋಜನೆಗೊಳ್ಳುವುದಿಲ್ಲ ಮತ್ತು ಐಸಿಸಿ ರ್ಯಾಂಕಿಂಗ್ನ ಟಾಪ್ ಆಟಗಾರರೆಲ್ಲಾ ಐಪಿಎಲ್ ತಂಡಗಳಲ್ಲಿ ಪಾಲ್ಗೊಂಡಿರುತ್ತಾರೆ.
ಭಾರತದ ಈ ಕ್ರಿಕೆಟ್ ಕೇಜ್ ಬಗ್ಗೆ ತಿಳಿದ ಜರ್ಮನಿಯ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಫೆಬ್ರವರಿ 26 ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಭೇಟಿ ನೀಡಿ ಐಪಿಎಲ್ಗಾಗಿ ಅಭ್ಯಾಸದಲ್ಲಿ ತೊಡಗಿರುವ ಆರ್ಸಿಬಿಯ ಮಹಿಳಾ ಮತ್ತು ಪುರುಷ ತಂಡದ ಆಟಗಾರರೊಂದಿಗೆ ಮತ್ತು ಕೆಎಸ್ಸಿಎಯ ಪ್ಲೇಯರ್ಗೊಂದಿಗೆ ಸುಮಾರು 15 ನಿಮಿಷಗಳ ಕಾಲ ಮಾತನಾಡಿದರು.
ಕ್ರೀಡೆಗೆ ಸಂಬಂಧಿಸಿದಂತೆ ಭಾರತದಲ್ಲಿ ಕ್ರಿಕೆಟ್ಗೆ ಹೆಚ್ಚು ಕ್ರೇಜ್ ಇದೆ. ಜರ್ಮನಿಯಲ್ಲಿ, ಕ್ರಿಕೆಟ್ ಅಷ್ಟು ಜನಪ್ರಿಯವಾಗಿಲ್ಲ. ಜರ್ಮನಿಯಲ್ಲಿ 2,00,000 ಕ್ಕೂ ಹೆಚ್ಚು ಭಾರತೀಯರು ಅಲ್ಲಿ ಕ್ರೀಡೆಯನ್ನು ಜನಪ್ರಿಯಗೊಳಿಸುತ್ತಿದ್ದಾರೆ. ಹೀಗಾಗಿ ಭಾರತದ ಕ್ರಿಕೆಟ್ ಹುಚ್ಚು ಅಭಿಮಾನವನ್ನು ಅರಿಯಲು ಇಚ್ಛಿಸುತ್ತೇನೆ ಎಂದು ಸ್ಕೋಲ್ಜ್ ಹೇಳಿಕೊಂಡಿದ್ದಾರೆ.
ಇದಲ್ಲದೆ, ಆರ್ಸಿಬಿ ಪುರುಷರ ಮತ್ತು ಮಹಿಳಾ ತಂಡಗಳೆರಡ ಬಗ್ಗೆ ಇರುವ ವಿಶೇಷ ಅಭಿಮಾನದ ಬಗ್ಗೆಯೂ ಅವರಿಗೆ ಕುತೂಹಲ ಇದ್ದು ಅದರ ಬಗ್ಗೆ ಕೇಳಿ ತಿಳಿದುಕೊಂಡಿದ್ದಾರೆ. ಆರ್ಸಿಬಿಯ ಪುರುಷ ಮತ್ತು ಮಹಿಳಾ ತಂಡದ ಬಗ್ಗೆ ತಿಳಿದುಕೊಂಡ ಅವರು ಎರಡು ತಂಡಗಳಿಗೂ ಮುಂಬರುವ ಐಪಿಎಲ್ಗೆ ಶುಭಾಶಯ ತಿಳಿಸಿದ್ದಾರೆ.
ಜರ್ಮನಿಯ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಭೇಟಿಯ ಬಗ್ಗೆ ಆರ್ಸಿಬಿ ತನ್ನ ಅಧಿಕೃತ ಟ್ವಿಟರ್ ಹ್ಯಾಡಲ್ನಲ್ಲಿ ಹಂಚಿಕೊಂಡಿದ್ದರು, ನಮ್ಮ ಚಿನ್ನಸ್ವಾಮಿ ಸ್ಟೇಡಿಯಂಗೆ ಜರ್ಮನಿಯ ಗೌರವಾನ್ವಿತ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಅವರು ಭೇಟಿ ನೀಡಿರುವುದರು ಸಂತಸ ತಂದಿದೆ. ಇದೇ ವೇಳೆ ಆರ್ಸಿಬಿಯ ಅಭ್ಯಾಸ ಶಿಬಿರಕ್ಕೆ ಅವರನ್ನು ಕರೆಯಲಾಯಿತು ಎಂದು ಬರೆದು ಹಂಚಿಕೊಂಡಿದ್ದಾರೆ.
ಭೇಟಿ ನೀಡಿದ ಜರ್ಮನಿಯ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಅವರಿಗೆ ಆರ್ಸಿಬಿ ತಂಡದ ಕಡೆಯಿಂದ ಟೀ ಶರ್ಟ್ ಮತ್ತು ತಂಡದ ಆಟಗಾರರು ಮತ್ತು ಆಟಗಾರ್ತಿಯರ ಸಹಿ ಇರುವ ಬ್ಯಾಟನ್ನು ನೆನಪಿಗಾಗಿ ಕೊಟ್ಟಿದ್ದಾರೆ. ಅವರೊಂದಿಗೆ ಸಂವಾದ ನಡೆಸಿದ ಆಟಗಾರರು ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ.
ಇದಕ್ಕೂ ಮುನ್ನ ಜರ್ಮನ್ ಚಾನ್ಸಲರ್ ಭಾನುವಾರ ಮಧ್ಯಾಹ್ನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಕರ್ನಾಟಕ ಆರೋಗ್ಯ ಸಚಿವ ಕೆ ಸುಧಾಕರ್, ಜರ್ಮನ್ ಕಾನ್ಸುಲೇಟ್ ಅಧಿಕಾರಿಗಳು ಮತ್ತು ಬೆಂಗಳೂರು ಪೊಲೀಸ್ ಕಮಿಷನರ್ ಸಿಎಚ್ ಪ್ರತಾಪ್ ರೆಡ್ಡಿ ಅವರನ್ನು ಬರಮಾಡಿಕೊಂಡರು. ನಂತರ ಟ್ವೀಟ್ ಮಾಡಿರುವ ಸುಧಾಕರ್ ಇಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜರ್ಮನಿಯ ಚಾನ್ಸೆಲರ್, ಘನತೆವೆತ್ತ @OlafScholz ಅವರನ್ನು ಸ್ವಾಗತಿಸಲಾಯಿತು. 2011 ರಿಂದ ಜರ್ಮನಿಯ ಚಾನ್ಸಲರ್‌ನಿಂದ ಭಾರತಕ್ಕೆ ಇದು ಮೊದಲ ಭೇಟಿಯಾಗಿದೆ. ನಮ್ಮ ಎರಡು ದೇಶಗಳ ನಡುವೆ ಅಂತರ-ಸರ್ಕಾರಿ ಸಮಾಲೋಚನೆಯನ್ನು (IGC) ಸ್ಥಾಪಿಸಲಾಗುವುದು ಎಂದು ಬರೆದುಕೊಂಡಿದ್ದಾರೆ.
ಎರಡು ದಿನದ ಪ್ರವಾಸಕ್ಕೆ ಬಂದಿದ್ದ ಜರ್ಮನ್ ಚಾನ್ಸೆಲರ್ ಶನಿವಾರ ದೆಹಲಿಗೆ ಭೇಟಿ ನೀಡಿದ್ದರು. ಅಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು.
ಇದನ್ನೂ ಓದಿ:ಗಾಯದಿಂದ ಚೇತರಿಸಿಕೊಳ್ಳದ ವೇಗಿ ಜಸ್ಪ್ರೀತ್ ಬೂಮ್ರಾ: ಐಪಿಎಲ್, WTC ಫೈನಲ್ನಿಂದ ಔಟ್