ಭಾರತ ಕ್ರಿಕೆಟ್ ತಂಡವು ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಿಂದ ಹೊರಬೀಳುತ್ತಿದ್ದಂತೆ ಹಲವು ಮಾಜಿ ಕ್ರಿಕೆಟ್ ದಿಗ್ಗಜರು, ವಿಶ್ಲೇಷಕರು ಟೀಕಾಪ್ರಹಾರ ನಡೆಸಿದ್ದಾರೆ. ರೋಹಿತ್ ಶರ್ಮಾ ನಾಯಕತ್ವ ಹಾಗೂ ಆರಂಭಿಕ ಆಟಗಾರ ಕೆಎಲ್ ರಾಹುಲ್ ಕಳಪೆ ಪ್ರದರ್ಶನ ಸೇರಿ ತಂಡದ ಇತರ ಆಟಗಾರರ ಬಗ್ಗೆಯೂ ಎಲ್ಲೆಡೆ ಅಪಸ್ವರ ಎದ್ದಿದೆ. ಕಳೆದ 10 ವರ್ಷಗಳಿಂದ ಭಾರತ ತಂಡ ಯಾವುದೇ ಐಸಿಸಿ ಟ್ರೋಫಿ ಗೆಲ್ಲದಿರುವುದೂ ಸಹ ಧೋನಿ ನಂತರ ಬಂದ ನಾಯಕರ ಬಗ್ಗೆ ಟೀಕೆಗೆ ಕಾರಣವಾಗಿದೆ.
ಉತ್ತಮ ಕ್ರಿಕೆಟ್ ಆಟಗಾರರು ಯಾವಾಗಲೂ ಉತ್ತಮ ನಾಯಕರಾಗಿರಬೇಕೇಂದೇನಿಲ್ಲ. ಆದರೆ 2013ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಜಯದ ನಂತರ ಭಾರತ ತಂಡ ಐಸಿಸಿ ಟ್ರೋಫಿಯ ಬರ ಎದುರಿಸುತ್ತಿದೆ. ಎಂಎಸ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ ಬಳಿಕ ವಿರಾಟ್ ಕೊಹ್ಲಿ ಹಾಗೂ ಇದೀಗ ರೋಹಿತ್ ಶರ್ಮಾ ತಂಡದ ನಾಯಕರಾಗಿದ್ದಾರೆ. ಕೊಹ್ಲಿ ನಾಯಕತ್ವದಲ್ಲಿ, ಭಾರತವು 2021ರಲ್ಲಿ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಟ್ರೋಫಿ ಗೆಲ್ಲುವ ಸಮೀಪಕ್ಕೆ ಬಂದು ಎಡವಿತ್ತು. ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಯಶಸ್ವಿ ನಾಯಕ ರೋಹಿತ್ ಬಗ್ಗೆ ಕ್ರಿಕೆಟ್ ತಜ್ಞರು ಭಾರಿ ನಿರೀಕ್ಷೆ ಹೊಂದಿದ್ದರು. ಆದರೆ ಇತ್ತೀಚೆಗೆ ಏಷ್ಯಾ ಕಪ್ ಮತ್ತು ಈಗ ಟಿ20 ವಿಶ್ವಕಪ್‌ನಲ್ಲಿ ರೋಹಿತ್ ಬಳಗ ಮುಗ್ಗರಿಸಿದೆ. ಇದು ಅಂತಾರಾಷ್ಟ್ರೀಯ ನಾಯಕತ್ವ ಸುಲಭವಲ್ಲ ಎಂಬುದನ್ನು ಸಾಬೀತುಪಡಿಸಿದೆ.