ನವದೆಹಲಿ: ಟೀಂ ಇಂಡಿಯಾ ಟೆಸ್ಟ್ ನಾಯಕತ್ವಕ್ಕೆ ವಿರಾಟ್ ಕೊಹ್ಲಿ ರಾಜೀನಾಮೆ ನೀಡುತ್ತಿದ್ದಂತೆ ಅನೇಕ ಪರ-ವಿರೋಧ ಮಾತುಗಳು ಕೇಳಿ ಬರಲು ಶುರುವಾಗಿವೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಟೀಂ ಇಂಡಿಯಾ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಕೂಡ ತಮ್ಮ ಅಭಿಪ್ರಾಯ ತಿಳಿಸಿದ್ದು, ವಿರಾಟ್ ವಿರುದ್ಧ ಚಾಟಿ ಬೀಸಿದ್ದಾರೆ.
ಟೀಂ ಇಂಡಿಯಾ ನಾಯಕತ್ವ ಯಾರೊಬ್ಬರ ಜನ್ಮಸಿದ್ಧ ಹಕ್ಕಲ್ಲ. ನಾಯಕತ್ವ ಇದ್ದರೂ, ಇಲ್ಲದಿದ್ದರೂ ಆಟಗಾರ ಕೂಡ ತಂಡಕ್ಕಾಗಿ ಆಡಬೇಕು. ಈ ಹಿಂದೆ ಮಹೇಂದ್ರ ಸಿಂಗ್ ಧೋನಿ ಆಡಿಲ್ವಾ?, ಅದರಲ್ಲಿ ಅಂತಹ ಯಾವುದೇ ವಿಶೇಷತೆ ಇಲ್ಲ ಎಂದರು.
ಸುದ್ದಿವಾಹಿನಿಯ ಸಂದರ್ಶನವೊಂದರಲ್ಲಿ ಭಾಗಿಯಾಗಿ ಮಾತನಾಡಿರುವ ಗಂಭೀರ್, ಈ ಹಿಂದೆ ಧೋನಿ ತಂಡಕ್ಕಾಗಿ ಮೂರು ಐಸಿಸಿ ಟ್ರೋಫಿ ಹಾಗೂ ಐಪಿಎಲ್ ಪ್ರಶಸ್ತಿ ಗೆದ್ದ ಬಳಿಕ ಕೂಡ ವಿರಾಟ್ ಕೊಹ್ಲಿ ನಾಯಕತ್ವದಡಿ ಆಡಿದ್ದಾರೆ. ಇದೀಗ ವಿರಾಟ್ ರಾಜೀನಾಮೆ ನೀಡಿದ್ದು, ಬೇರೆ ಪ್ಲೇಯರ್ ಆ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಮುಂದಿನ ದಿನಗಳಲ್ಲೂ ಇದೇ ರೀತಿಯಾಗಿ ಮುಂದುವರೆಯುತ್ತದೆ ಎಂದು ಹೇಳಿದರು.