ದುಬೈ:ಅಚ್ಚರಿಯ ರೀತಿಯಲ್ಲಿ ಏಷ್ಯಾ ಕಪ್ ಫೈನಲ್ನಲ್ಲಿ ಶ್ರೀಲಂಕಾ ತಂಡ ಚಾಂಪಿಯನ್ ಆಗಿದೆ. ಮಹತ್ವದ ಟೂರ್ನಿ ಆಯೋಜಿಸುವ ಅವಕಾಶ ಪಡೆದುಕೊಂಡಿದ್ರೂ ತೀವ್ರ ಆರ್ಥಿಕ ಬಿಕ್ಕಟ್ಟಿನಿಂದಾಗಿ ವಿಶ್ವದ ಮುಂದೆ ತಲೆಬಾಗಿ ಟೂರ್ನಿಯನ್ನು ಬೇರೆಡೆ ನಡೆಸುವಂತೆ ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಐಸಿಸಿಗೆ ಮನವಿ ಮಾಡಿತ್ತು. ಹೀಗಾಗಿ, ದುಬೈನಲ್ಲಿ ಈ ಟೂರ್ನಿ ನಡೆಸಲು ನಿರ್ಧಾರ ಕೈಗೊಳ್ಳಲಾಗಿತ್ತು.
ಆರ್ಥಿಕ ಬಿಕ್ಕಟ್ಟು, ರಾಜಕೀಯ ಅಸ್ಥಿರತೆಯ ನಡುವೆಯೂ ಕೂಡಾ ಟೂರ್ನಿಯನಲ್ಲಿ ಭಾಗಿಯಾಗಿದ್ದ ಶ್ರೀಲಂಕಾ ತಂಡ ಎಲ್ಲ ಸಮಸ್ಯೆಗಳನ್ನೂ ಮೆಟ್ಟಿ ನಿಲ್ಲುವಲ್ಲಿ ಯಶಸ್ವಿಯಾಗಿದೆ. ಸೋಲಿನೊಂದಿಗೆ ಅಭಿಯಾನ ಆರಂಭಿಸಿದ್ದ ಈ ಪಡೆ ತದನಂತರ ಗೆಲುವಿನ ನಾಗಾಲೋಟ ಮುಂದುವರೆಸಿ, ಪ್ರಶಸ್ತಿಗೆ ಮುತ್ತಿಕ್ಕಿತು.
ಪಾಕ್ ವಿರುದ್ಧ ನಿನ್ನೆ ನಡೆದ ರೋಚಕ ಹಣಾಹಣಿಯಲ್ಲಿ 23 ರನ್ಗಳ ಅಂತರದಿಂದ ಗೆಲುವು ದಾಖಲು ಮಾಡಿರುವ ಜೊತೆಗೆ 6ನೇ ಸಲ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ತಂಡ ಚಾಂಪಿಯನ್ ಆಗಿ ಹೊರಹೊಮ್ಮುತ್ತಿದ್ದಂತೆ ಟೀಂ ಇಂಡಿಯಾ ಮಾಜಿ ಆಟಗಾರ ಗೌತಮ್ ಗಂಭೀರ್, ಶ್ರೀಲಂಕಾ ಧ್ವಜವನ್ನು ಕೈಯಲ್ಲಿ ಹಿಡಿದು ಕ್ಯಾಮರಾಗೆ ಪೋಸ್ ಕೊಟ್ಟರು. ಜೊತೆಗೆ, ಇದರ ತುಣುಕನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ.