ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಟೀಂ ಇಂಡಿಯಾ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಮರಳಿ ಫಾರ್ಮ್ ಕಂಡುಕೊಂಡಿದ್ದಾರೆ. ಇದರಿಂದಾಗಿ ಸತತವಾಗಿ 1020 ದಿನಗಳಷ್ಟು ಕಾಲ ಸೆಂಚುರಿರಹಿತ ದಿನಗಳನ್ನು ಅನುಭವಿಸಿದ್ದ ಕೊಹ್ಲಿ ಮತ್ತು ತಂಡದ ಮ್ಯಾನೇಜ್‌ಮೆಂಟ್ ತಲೆನೋವು ಕೊಂಚ ಕಡಿಮೆಯಾಗಿದೆ. ರೋಹಿತ್ ಶರ್ಮಾ ಬಳಗ ಟಿ20 ವಿಶ್ವಕಪ್ ಎದುರು ನೋಡುತ್ತಿದ್ದಾಗಲೇ ಏಷ್ಯಾ ಕಪ್ ಕೊನೆಯ ಹಂತದಲ್ಲಿ ಕೊಹ್ಲಿ ಬ್ಯಾಟ್‌ನಿಂದ ಸೊಗಸಾದ ಶತಕ ಸಿಡಿದಿದ್ದು, ತಂಡದ ಆತ್ಮವಿಶ್ವಾಸವನ್ನು ಸಹಜವಾಗಿಯೇ ಮತ್ತಷ್ಟು ಹೆಚ್ಚಿಸಿದೆ.
ಏಷ್ಯಾ ಕಪ್‌ನಲ್ಲಿ ಅಫ್ಘಾನಿಸ್ತಾನದೆದುರು ಆರಂಭಿಕರಾಗಿ ಕಣಕ್ಕಿಳಿದಿದ್ದ ಕೊಹ್ಲಿ ಅಜೇಯ 122 ರನ್ ಗಳಿಸಿ ಅಬ್ಬರಿಸಿದ್ದರು. ಇದನ್ನು ಗಮನಿಸಿದ ಕೆಲವು ಕ್ರಿಕೆಟ್ ತಜ್ಞರು ಕೊಹ್ಲಿ ಟಿ20 ಫಾರ್ಮೆಟ್‌ನಲ್ಲಿ 3ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸುವುದರ ಬದಲು ಓಪನರ್ ಬಂದರೆ ಹೆಚ್ಚು ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದರು.
ಇದನ್ನೂ ಓದಿ:ಮಹಮ್ಮದ್ ಶಮಿಗೆ ಕೋವಿಡ್: ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಿಂದ ಔಟ್, ಉಮೇಶ್‌ಗೆ ಸ್ಥಾನ
ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಟಿಂ ಇಂಡಿಯಾದ ಮಾಜಿ ಬ್ಯಾಟರ್ ಹಾಗು 2011 ರ ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದ ಗೌತಮ್ ಗಂಭೀರ್ ಗರಂ ಆಗಿಯೇ ಪ್ರತಿಕ್ರಿಯಿಸಿದ್ದಾರೆ. "ಈ ರೀತಿಯ ಪ್ರಯೋಗಗಳನ್ನು ಕೊಹ್ಲಿ ಮೇಲೆ ಮಾಡಬೇಡಿ. ಇದು ನಾನ್‌ಸೆನ್ಸ್. ಕೆ.ಎಲ್.ರಾಹುಲ್ ಅಥವಾ ರೋಹಿತ್ ಶರ್ಮಾ ಜೊತೆ ಕೊಹ್ಲಿ ಆರಂಭಿಕನಾಗಿ ಕಣಕ್ಕಿಳಿಯಲು ಸಾಧ್ಯವಿಲ್ಲ. ಕೊಹ್ಲಿ ಬ್ಯಾಕಪ್ ಓಪನರ್ ಆಗಿದ್ದಾರೆ. ಹೀಗಾಗಿ ನಾನು ಕೊಹ್ಲಿ 3ನೇ ಕ್ರಮಾಂಕದಲ್ಲೇ ಬ್ಯಾಟ್ ಬೀಸುವುದು ಸೂಕ್ತ. ಹಾಗಂತ ಕೊಹ್ಲಿಗೆ 3ನೇ ಕ್ರಮಾಂಕವೇ ಫಿಕ್ಸ್ ಎನ್ನಲಾರೆ. ಏಕೆಂದರೆ, ಒಂದು ವೇಳೆ ಆರಂಭಿಕರಾಗಿ ಬಂದ ಬ್ಯಾಟರ್‌ಗಳು 10ನೇ ಓವರ್‌ಗಳವರೆಗೂ ಬ್ಯಾಟಿಂಗ್ ಮಾಡಿದರೆ ಖಂಡಿತವಾಗಿಯೂ 3ನೇ ಸ್ಥಾನಕ್ಕೆ ಸೂರ್ಯಕುಮಾರ್ ಅವರೇ ಕ್ರೀಸ್‌ಗಿಳಿಯಬೇಕು. ಇದಕ್ಕೂ ಮುನ್ನ ವಿಕೆಟ್ ಬಿದ್ದರಷ್ಟೇ ಅಲ್ಲಿ ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡಬೇಕು" ಎಂದು ಗಂಭೀರ್ ವಿಶ್ಲೇಷಿಸಿದರು.
ಇದನ್ನೂ ಓದಿ:36 ರನ್ ಬಾರಿಸಿದರೆ ಈ ಆಟಗಾರನ ದಾಖಲೆ ಮುರಿಯುವ ವಿರಾಟ್ ಕೊಹ್ಲಿ
ಟಿ20 ವಿಶ್ವಕಪ್‌ನಲ್ಲಿ ಅಕ್ಟೋಬರ್ 23 ರಂದು ಭಾರತ ತಂಡವು ಪಾಕಿಸ್ತಾನ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದೆ.
ಭಾರತ ತಂಡ ಹೀಗಿದೆ:ರೋಹಿತ್ ಶರ್ಮಾ (ನಾಯಕ), ಕೆ.ಎಲ್.ರಾಹುಲ್(ಉಪ ನಾಯಕ) ಸೂರ್ಯ ಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್(ವಿ.ಕೀ), ಹಾರ್ದಿಕ್ ಪಾಂಡ್ಯ, ಆರ್.ಅಶ್ವಿನ್, ಯಜ್ವೇಂದ್ರ ಚಹಲ್, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್ ಹಾಗು ಅರ್ಷ್‌ದೀಪ್ ಸಿಂಗ್.