ನವದೆಹಲಿ: ಭಾರತ ತಂಡದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಮತ್ತು ಬಿಜೆಪಿ ಸಂಸದ ಗೌತಮ್ ಗಂಭೀರ್ ಮತ್ತು ಅವರ ಕುಟುಂಬಕ್ಕೆ ಇಮೇಲ್ ಮೂಲಕ ಜೀವ ಬೆದರಿಕೆಯೊಡ್ಡಲಾಗಿದೆ. ಈ ಬಾರಿ ಪಾಕಿಸ್ತಾನದ ಕರಾಚಿಯಿಂದ ಇಮೇಲ್ ಬಂದಿದೆ.
ಐಸಿಸ್ ಕಾಶ್ಮೀರ್ ಎಂಬ ಇಮೇಲ್ ಐಡಿಯಿಂದ ಬೆದರಿಕೆ ಬಂದಿದೆ. ಅದರಲ್ಲಿ ಡೆಲ್ಲಿ ಪೊಲೀಸ್ ಮತ್ತು ಕೇಂದ್ರ ಡೆಲ್ಲಿ ಡಿಸಿಪಿ ಶ್ವೇತಾ ಚೌಹಾಣ್ ಹೆಸರನ್ನು ಕೂಡ ಪ್ರಸ್ತಾಪಿಸಿದ್ದಾರೆ. ನಿಮ್ಮಿಂದ ಮತ್ತು ನಿಮ್ಮ ಭದ್ರತಾ ಪಡೆಗಳಿಂದ ನಮ್ಮನ್ನೇನೂ ಮಾಡಲಾಗುವುದಿಲ್ಲ ಎಂದು ದುಷ್ಕರ್ಮಿಗಳು ಸವಾಲು ಹಾಕಿದ್ದಾರೆ.
ಈ ಸಂದೇಶ ಭಾನುವಾರ ಮಧ್ಯರಾತ್ರಿ 1:37ರ ಸುಮಾರಿಗೆ isiskasmir@yahoo.com ಎಂಬ ಇಮೇಲ್ನಿಂದ ಬಂದಿದೆ. ನವೆಂಬರ್ 24ರ ಬೆಳಿಗ್ಗೆ ಗೌತಮ್ ಗಂಭೀರ್ ಅವರ ಅಧಿಕೃತ ಇಮೇಲ್ ಐಡಿಗೆ, ಗಂಭೀರ್ ಕುಟುಂಬವನ್ನು ಹತ್ಯೆ ಮಾಡುವ ಬೆದರಿಕೆ ಸಂದೇಶ ಬಂದಿತ್ತು. ನಂತರ ಅವರ ಪಿಎ ಗೌರವ್ ಅರೋರ ಡಿಸಿಪಿ ಚೌಹಾಣ್ಗೆ ಎಫ್ಐಆರ್ ದಾಖಲಿಸಲು ಮತ್ತು ಹೆಚ್ಚಿನ ಭದ್ರತೆ ಒದಗಿಸಲು ಪತ್ರ ಬರೆದಿದ್ದರು.