ನವದೆಹಲಿ: ವಿಶ್ವಕಪ್ ಆರಂಭಕ್ಕೆ ಇನ್ನು ಬೆರಳೆಣಿಕೆಯ ದಿನಗಳು ಬಾಕಿ ಇರುವಾಗ ಯಾವ ಆಟಗಾರ ಉತ್ತಮ ಪ್ರದರ್ಶನ ನೀಡುವರು ಎಂಬ ನಿರೀಕ್ಷೆ ಎಲ್ಲರಲ್ಲಿದೆ. ವಿರಾಟ್ ಕೊಹ್ಲಿ, ಕೇನ್ ವಿಲಿಯಮ್ಸನ್, ಸ್ಟೀವ್ ಸ್ಮಿತ್ ಮತ್ತು ಜೋ ರೂಟ್ ಅವರನ್ನು ಕ್ರಿಕೆಟ್‌ನ ಫ್ಯಾಬ್ ಫೋರ್ ಎಂದು ಕರೆಯಲಾಗುತ್ತಿದೆ. ಈ ನಾಲ್ವರು ಬ್ಯಾಟರ್ಗಳ ಮೇಲೆ ಹೆಚ್ಚಿನ ನಿರೀಕ್ಷೆ ಜಗತ್ತೇ ಇಟ್ಟಿದೆ. ಅಲ್ಲದೇ ವಿರಾಟ್ ತವರಿನಲ್ಲಿ ಆಡುತ್ತಿರುವುದರಿಂದ ಅವರ ಬ್ಯಾಟಿಂಗ್ ಮೇಲೆ ಎಲ್ಲರು ಕಣ್ಣಿಟ್ಟಿದ್ದಾರೆ. ಏಷ್ಯಾಕಪ್ನಲ್ಲಿ ಪಾಕಿಸ್ತಾನದ ವಿರುದ್ಧ ಗಳಿಸಿದ ಶತಕ ಅವರ ಮೇಲಿನ ಭರವಸೆಯನ್ನು ಇನ್ನಷ್ಟೂ ಹೆಚ್ಚಿಸಿದೆ.
ಹೀಗಿರುವಾಗ ಭಾರತದ ಮಾಜಿ ಆಟಗಾರ ಗೌತಮ್ ಗಂಭೀರ್ ಈ ನಾಲ್ವರು ಆಟಗಾರರ ಹೊರತಾಗಿ, 2023ರ ವಿಶ್ವಕಪ್‌ನಲ್ಲಿ ಪಾಕಿಸ್ತಾನದ ನಾಯಕ ಬಾಬರ್ ಆಜಮ್ ಶ್ರೇಷ್ಠ ಬ್ಯಾಟ್ಸ್‌ಮನ್ ಆಗುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಐಸಿಸಿ ನಂ.1 ಶ್ರೇಯಾಂಕಿತ ಬ್ಯಾಟರ್ ಕಳೆದ ಒಂದು ವರ್ಷದಿಂದ ಏಕದಿನ ಮಾದರಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಅವರು ಏಷ್ಯಾಕಪ್ನಲ್ಲಿ ಬಲಿಷ್ಠ ತಂಡಗಳ ಮುಂದೆ ಮಂಕಾದರೂ ನೇಪಾಳದ ವಿರುದ್ಧ ಗಮನಾರ್ಹ 151 ರನ್ನ ಇನ್ನಿಂಗ್ಸ್ ಕಟ್ಟಿದ್ದಾರೆ. ನಾಯಕತ್ವ ಜವಾಬ್ದಾರಿಯ ಜೊತೆಗೆ ಬಾಬರ್ ಯಾವಾಗ ಬೇಕಾದರೂ ತಂಡಕ್ಕೆ ರನ್ ಗಳಿಸುವ ಸಾಮರ್ಥ್ಯ ಹೊಂದಿದ್ದಾರೆ.
ಏಷ್ಯನ್ ರಾಷ್ಟ್ರಗಳ ವಿಶ್ವಕಪ್ ಎಂದೇ ಕರೆಯಬಹುದಾದ ಏಷ್ಯಾಕಪ್ನಲ್ಲಿ ಭಾರತ ಉತ್ತಮ ಪ್ರದರ್ಶನ ನೀಡಿದೆ. ಭಾರತವು ಪಾಕಿಸ್ತಾನ ಮತ್ತು ಶ್ರೀಲಂಕಾ ಎರಡನ್ನೂ ಸೋಲಿಸಿ ಏಷ್ಯಾಕಪ್ ಫೈನಲ್ ತಲುಪಿತು ಮತ್ತು ನಂತರ ಶ್ರೀಲಂಕಾವನ್ನು ಸೋಲಿಸಿ ದಾಖಲೆಯ 8 ನೇ ಬಾರಿಗೆ ಟ್ರೋಫಿಯನ್ನು ಗೆದ್ದುಕೊಂಡಿತು. ಭಾರತದ ಯುವ ಬ್ಯಾಟರ್ಗಳು ಏಷ್ಯಾಕಪ್ನಲ್ಲಿ ತಮ್ಮ ಉತ್ತಮ ಪ್ರದರ್ಶನವನ್ನು ತೋರಿದ್ದಾರೆ.