ಸಿಡ್ನಿ(ಆಸ್ಟ್ರೇಲಿಯಾ):ಕ್ರಿಕೆಟ್ ದೇವರೆಂದೇ ಖ್ಯಾತಿಯಾದ ಸಚಿನ್ ತೆಂಡುಲ್ಕರ್ ಅವರಿಗೆ ಇಂದು 50 ನೇ ಜನ್ಮದಿನದ ಸಂಭ್ರಮ. ಮಾಸ್ಟರ್ ಬ್ಲಾಸ್ಟರ್ಗೆ ಇಡೀ ವಿಶ್ವದಾದ್ಯಂತ ಅಭಿಮಾನಿಗಳಿದ್ದಾರೆ. ಜನ್ಮದಿನಕ್ಕೆ ಅಭಿಮಾನಿಗಳು ವಿಶೇಷವಾಗಿ ಶುಭಾಶಯ ಕೋರುತ್ತಿದ್ದಾರೆ. ಆಸ್ಟ್ರೇಲಿಯಾ ಕ್ರಿಕೆಟ್ ಕೂಡ ಸಚಿನ್ರ ಬರ್ತ್ಡೇಗೆ ವಿಶೇಷ ಗೌರವ ಸಲ್ಲಿಸಿದೆ.
ಸಿಡ್ನಿ ಕ್ರಿಕೆಟ್ ಮೈದಾನದ ಗೇಟ್ ಒಂದಕ್ಕೆ ಭಾರತೀಯ ಮಾಜಿ ಕ್ರಿಕೆಟಿಗನ ಹೆಸರಿಟ್ಟಿದೆ. ಈ ಮೂಲಕ ಸಚಿನ್ ತೆಂಡೂಲ್ಕರ್ ಅವರ 50ನೇ ಹುಟ್ಟುಹಬ್ಬವನ್ನು ಸ್ಮರಣೀಯವಾಗಿಸಿದೆ. ಇದರ ಜೊತೆಗೆ ವೆಸ್ಟ್ಇಂಡೀಸ್ ಕ್ರಿಕೆಟ್ ದಿಗ್ಗಜ ಬ್ರಿಯಾನ್ ಲಾರಾ ಅವರ ಹೆಸರನ್ನೂ ಗೇಟ್ಗೆ ನಾಮಕರಣ ಮಾಡಿ ಅನಾವರಣಗೊಳಿಸಿದೆ. ಇನ್ನು ಮುಂದೆ ಸಿಡ್ನಿ ಕ್ರೀಡಾಂಗಣದ ಗೇಟ್ಗೆ ಲಾರಾ-ತೆಂಡೂಲ್ಕರ್ ಗೇಟ್ಸ್ ಎಂದು ಕರೆಯಲಾಗುತ್ತದೆ. ಹೊಸದಾಗಿ ಹೆಸರಿಸಲಾದ ಗೇಟ್ ಮೂಲಕವೇ ಕ್ರೀಡಾಂಗಣ ಪ್ರವೇಶಿಸಬೇಕು ಎಂದು ಆಸ್ಟ್ರೇಲಿಯಾ ಕ್ರಿಕೆಟ್ ಸಂಸ್ಥೆ ಹೇಳಿದೆ. ಇದಲ್ಲದೇ, ಲಾರಾ ಮತ್ತು ಸಚಿನ್ರ ದಾಖಲೆಗಳುಳ್ಳ ಫಲಕವನ್ನು ಹಾಕಲಾಗಿದೆ.
ಅಲ್ಲದೇ, ಇನ್ನೊಂದು ಗೇಟ್ಗೆ ಆಸ್ಟ್ರೇಲಿಯಾದ ದಂತಕಥೆ ಡಾನ್ ಬ್ರಾಡ್ಮನ್ ಅವರ ಹೆಸರಿಡಲಾಗಿದೆ. ಆಸೀಸ್ನ ಸಿಡ್ನಿ ಮೈದಾನದಲ್ಲಿ ತೆಂಡೂಲ್ಕರ್ ಮೊದಲ ಟೆಸ್ಟ್ ಶತಕವನ್ನು ಬಾರಿಸಿದ್ದರು. ಮಾಜಿ ಕ್ರಿಕೆಟಿಗ ಈ ಮೈದಾನದಲ್ಲಿ ಆಡಿದ 5 ಟೆಸ್ಟ್ ಪಂದ್ಯಗಳಿಂದ 157 ಸರಾಸರಿಯಲ್ಲಿ ಬ್ಯಾಟ್ ಬೀಸಿದ್ದಾರೆ. ಒಟ್ಟಾರೆ ಈ ಮೈದಾನದಲ್ಲಿ 13 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 100 ರ ಸರಾಸರಿಯಲ್ಲಿ 1,100 ರನ್ ಗಳಿಸಿದ್ದಾರೆ. ಇದರಲ್ಲಿ 4 ಶತಕಗಳು ಮತ್ತು 4 ಅರ್ಧಶತಕಗಳು ಗಳಿಸಿದ್ದಾರೆ. ಔಟಾಗದೇ 241 ಅತ್ಯುತ್ತಮ ಸ್ಕೋರ್ ಆಗಿದೆ. ವೆಸ್ಟ್ ಇಂಡೀಸ್‌ನ ವಿವ್ ರಿಚರ್ಡ್ಸ್ (1,134 ರನ್) ಮತ್ತು ಡೆಸ್ಮಂಡ್ ಹೇನ್ಸ್ (1,181 ರನ್) ಅವರ ಬಳಿಕ ಸಚಿನ್ ಈ ಮೈದಾನದಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿದೇಶಿ ಆಟಗಾರರಾಗಿದ್ದಾರೆ.