ಅಹಮದಾಬಾದ್: ಐಪಿಎಲ್ ಆರಂಭಿಕ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ 92 ರನ್ ಗಳಿಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆರಂಭಿಕ ಆಟಗಾರ ರುತುರಾಜ್ ಗಾಯಕ್ವಾಡ್ ಅವರ ಸಿಕ್ಸರ್ ಹೊಡೆತಗಳ ಬಗ್ಗೆ ಟೀಂ ಇಂಡಿಯಾ ಮಾಜಿ ಅನಿಲ್ ಕುಂಬ್ಳೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಗಾಯಕ್ವಾಡ್ ಅವರ ಎಲ್ಲಾ ಹೊಡೆತಗಳು ''ಕ್ಲೀನ್'' ಮತ್ತು ''ಉತ್ತಮ ಟೈಮಿಂಗ್''ನ ಫಲಿತಾಂಶವಾಗಿದೆ ಎಂದು ಕುಂಬ್ಳೆ ಹೇಳಿದ್ದಾರೆ.
''ಇನ್ನಿಂಗ್ಸ್ನಲ್ಲಿ 9 ಸಿಕ್ಸರ್ ಹೊಡೆಯುವುದು ನಿಜವಾಗಿಯೂ ಅದ್ಭುತ, ಪ್ರತಿಯೊಂದು ಹೊಡೆತವು ಸ್ಪಷ್ಟವಾಗಿ ಕಾಣುತ್ತದೆ. ಯಾವುದೇ ಬಲಪ್ರದರ್ಶನವಿಲ್ಲದೇ ಕೇವಲ ಟೈಮಿಂಗ್ ಮೂಲಕ ಇದು ಸಾಧ್ಯ'' ಎಂದು ಅಧಿಕೃತ ಐಪಿಎಲ್ ಪ್ರಸಾರಕರ ಬಿಡುಗಡೆಯಲ್ಲಿ ಕುಂಬ್ಳೆ ಹೇಳಿದ್ದಾರೆ. ಆದರೆ, 50 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು 9 ಸಿಕ್ಸರ್ ಒಳಗೊಂಡ ಗಾಯಕ್ವಾಡ್ ಅವರ ಇನ್ನಿಂಗ್ಸ್ ಗುಜರಾತ್ ಟೈಟಾನ್ಸ್ನ ಆಲ್ರೌಂಡರ್ ಪ್ರದರ್ಶನದಿಂದ ಮರೆಯಾಯಿತು.
ಗಾಯಕ್ವಾಡ್ ಆಟವನ್ನು ಅಭಿನಂದಿಸಿದ ಭಾರತದ ಮಾಜಿ ವಿಕೆಟ್ ಕೀಪರ್ ಪಾರ್ಥಿವ್ ಪಟೇಲ್, ‘‘ಇತರ ಬ್ಯಾಟ್ಸ್ಮನ್ಗಳಿಗೆ ಹೋಲಿಸಿದರೆ ರುತುರಾಜ್ ಗಾಯಕ್ವಾಡ್ ವಿಭಿನ್ನ ವಿಕೆಟ್ನಲ್ಲಿ ಬ್ಯಾಟಿಂಗ್ ಮಾಡುತ್ತಿರುವಂತೆ ತೋರುತ್ತಿದೆ. ಅವರು ಬಳಸಿದ ವಿಧಾನವು ಅತ್ಯಂತ ಪ್ರಶಂಸನೀಯವಾಗಿದೆ’’ ಎಂದು ಜಿಯೋ ಸಿನಿಮಾ ಎಕ್ಸ್ಪರ್ಟ್ನಲ್ಲಿ ಪಾರ್ಥಿವ್ ಹೇಳಿದ್ದಾರೆ. 2021ರ ಐಪಿಎಲ್ ಸಮಯದಲ್ಲಿ ಗಾಯಕ್ವಾಡ್ ಅವರು 16 ಪಂದ್ಯದಲ್ಲಿ 635 ರನ್ ಗಳಿಸಿದ್ದರು, ಇದರಲ್ಲಿ ಒಂದು ಶತಕ ಒಳಗೊಂಡಿತ್ತು ಮತ್ತು ಐಪಿಎಲ್ನಲ್ಲಿ ಸಿಎಸ್ಕ್ ತಂಡವು ನಾಲ್ಕನೇ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಕಳೆದ ವರ್ಷ ಚೆನ್ನೈ ತಂಡವು ಕಳಪೆ ಪ್ರದರ್ಶನದಿಂದಾಗಿ 9ನೇ ಸ್ಥಾನ ಪಡೆದುಕೊಂಡಿತ್ತು.